ಆರ್‍ಬಿಕೆವಿ ಹಾಲು ಒಕ್ಕೂಟದ ಅವ್ಯವಹಾರ ತನಿಖೆಯಾಗಲಿ ; ವೈ.ಎಂ. ಸತೀಶ್
ಬಳ್ಳಾರಿ, 19 ಏಪ್ರಿಲ್ (ಹಿ.ಸ.) : ಆ್ಯಂಕರ್ : ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟದಲ್ಲಿ ಕಳೆದ ಒಂದು ವರ್ಷದಿಂದ ಕಾನೂನಿಗೆ ವಿರುದ್ಧವಾದ, ಸರ್ವಾಧಿಕಾರದ ಆಡಳಿತ ನಡೆಯುತ್ತಿರುವ ಕಾರಣ ಹಾಲು ಉತ್ಪಾದಕರು ಆರ್ಥಿಕವಾಗಿ ನಷ್ಟಕ್ಕೊಳಗಾಗಿ ಒಕ್ಕೂಟವೂ ನಷ್ಟಕ್ಕೊಳಗಾಗಿದ್ದು, ಈ
ಆರ್‍ಬಿಕೆವಿ ಹಾಲು ಒಕ್ಕೂಟದ ಅವ್ಯವಹಾರ ತನಿಖೆಯಾಗಲಿ ; ವೈ.ಎಂ. ಸತೀಶ್


ಆರ್‍ಬಿಕೆವಿ ಹಾಲು ಒಕ್ಕೂಟದ ಅವ್ಯವಹಾರ ತನಿಖೆಯಾಗಲಿ ; ವೈ.ಎಂ. ಸತೀಶ್


ಬಳ್ಳಾರಿ, 19 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟದಲ್ಲಿ ಕಳೆದ ಒಂದು ವರ್ಷದಿಂದ ಕಾನೂನಿಗೆ ವಿರುದ್ಧವಾದ, ಸರ್ವಾಧಿಕಾರದ ಆಡಳಿತ ನಡೆಯುತ್ತಿರುವ ಕಾರಣ ಹಾಲು ಉತ್ಪಾದಕರು ಆರ್ಥಿಕವಾಗಿ ನಷ್ಟಕ್ಕೊಳಗಾಗಿ ಒಕ್ಕೂಟವೂ ನಷ್ಟಕ್ಕೊಳಗಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಒಕ್ಕೂಟದ ಅಧ್ಯಕ್ಷ, ಮಾಜಿ ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ ಅವರು ಹಾಲು ಉತ್ಪಾದಕ ರೈತರ ವಿರೋಧಿಗಳಾಗಿದ್ದಾರೆ. ತಮ್ಮ ವೈಯಕ್ತಿಕ ವಿಚಾರಗಳಿಗೆ ತಕ್ಕಂತೆ ಅಧಿಕಾರಿಗಳನ್ನು - ಸಿಬ್ಬಂದಿಗಳನ್ನು - ಕಾರ್ಮಿಕರನ್ನು ಹಾಗೂ ಆಡಳಿತ ಮಂಡಲಿಯನ್ನು ದುರುಪಯೋಗ ಮಾಡಿಕೊಂಡು, ಸಂಸ್ಥೆಯ ನಷ್ಟಕ್ಕೆ ಕಾರಣರಾಗಿದ್ದಾರೆ. ಸರ್ಕಾರ ತಕ್ಷಣವೇ ಎಚ್ಚೆತ್ತು ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ, ಸಂಸ್ಥೆಯನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟಕ್ಕೆ ಒಟ್ಟು 21 ನಿರ್ದೇಶಕರನ್ನು ಹೊಂದಲು ಅವಕಾಶವಿದೆ. ಆದರೆ, ಪ್ರಸ್ತುತ ಕೇವಲ 17 ನಿರ್ದೇಶಕರನ್ನು ಹೊಂದಲು ಸರ್ವ ಸದಸ್ಯರು ಅನುಮೋದನೆ ನೀಡಿದ್ದಾರೆ. ಬಾಕಿ ಉಳಿದಿರುವ ನಾಲ್ಕು ನಿರ್ದೇಶಕ ಹುದ್ದೆಗಳನ್ನು ವಿಜಯನಗರ ಜಿಲ್ಲೆಗೇ ಪಡೆಯಲು ಹುನ್ನಾರ ನಡೆಸಿರುವ, ಭೀಮಾನಾಯ್ಕ ಅವರು ವ್ಯವಸ್ಥೆಗೆ, ಸಹಕಾರಿ ಕಾಯ್ದೆಗೆ ವಿರುದ್ಧವಾಗಿದ್ದಾರೆ. ಬಳ್ಳಾರಿ ಜಿಲ್ಲೆಗೆ ನಾಲ್ಕು ನಿರ್ದೇಶಕರ ಹುದ್ದಗಳು ಬೇಕು ಎಂದು ಹೇಳಿದ ಅವರು, ಈ ಕುರಿತು ನ್ಯಾಯಾಲಯದಲ್ಲಿ ದಾವೆ ಇದೆ ಎಂದರು.

ಕೆಎಂಆರ್‍ಸಿಯ ಅನುದಾನದಲ್ಲಿ ಘೋಷಣೆಯಾಗಿರುವ ಮೆಗಾಡೈರಿ ನಿರ್ಮಾಣಕ್ಕೆ ರಾಷ್ಟ್ರೀಯ ಡೈರಿ ಬೋರ್ಡ್ (ಎನ್‍ಡಿಡಿಬಿ)ಯು ಕೊಳಗಲ್ಲಿನಲ್ಲಿ ಸ್ಥಳ ಪರಿಶೀಲನೆ ಮಾಡಿ, ಒಪ್ಪಿಗೆ ನೀಡಿದ್ದು, ಜಿಲ್ಲಾಡಳಿತವೂ 15 ಎಕರೆ ಭೂಮಿಯನ್ನು ನೀಡಿದೆ. ಆದರೆ, ಜಿಲ್ಲಾಡಳಿತಕ್ಕೆ ಹಣವನ್ನು ದುರುದ್ದೇಶದಿಂದಲೇ ಪಾವತಿಸುತ್ತಿಲ್ಲ. ವಿಜಯನಗರಕ್ಕೆ ಬೇಕಾದರಲ್ಲಿ ಸರ್ಕಾರದಿಂದ ಮತ್ತೊಂದು ಮೆಗಾಡೈರಿಯನ್ನು ಅವರು ಸ್ಥಾಪಿಸಲಿ. ವಿಜಯನಗರ ಜಿಲ್ಲೆಯಲ್ಲಿ ಕ್ಯಾಟಲ್ ಫೀಡಿಂಗ್ ಫಾರ್ಮ್ ನೀಡಲಾಗಿದೆ ಎಂದರು.

ಒಕ್ಕೂಟದ ಹಾಲಿ ಆಡಳಿತ ಮಂಡಲಿಯ ಅಧಿಕಾರವಧಿಯು ಪೂರ್ಣಗೊಂಡಿದೆ. ಪ್ರಭಾರಿ ಮಂಡಲಿಯು ಯಾವುದೇ ರೀತಿಯ ಪ್ರಮುಖವಾದ ನಿರ್ಣಯಗಳನ್ನು ಕೈಗೊಳ್ಳುವಂತಿಲ್ಲ. ಆದರೂ, ರೈತರ ಪ್ರತೀ ಲೀಟರ್ ಹಾಲಿನ ಹಣದಲ್ಲಿ ರೂ. 1.50 ಕಡಿತ ಮಾಡಿ, ಸಂಸ್ಥೆಯ ನಷ್ಟವನ್ನು ಸರಿತೂಗಿಸಿಕೊಳ್ಳುತ್ತಿರುವುದು ರೈತರನ್ನು ಶೋಷಿಸುತ್ತಿರುವುದಕ್ಕೆ ಜೀವಂತ ಉದಾಹರಣೆ. ಕಡಿತ ಮಾಡಿರುವ ಹಣವನ್ನು ಶೀಘ್ರದಲ್ಲೇ ಪಾವತಿಸಬೇಕು ಎಂದು ಅವರು ಆಗ್ರಹಿಸಿದರು.

ಒಕ್ಕೂಟದ ಅಡಿಯಲ್ಲಿ ಅನೇಕ ಕೇಂದ್ರದಲ್ಲಿ ಎನ್‍ಡಿಡಿಬಿಯ ನಿಯಮಗಳನ್ನು - ಷರತ್ತುಗಳನ್ನು ಪಾಲಿಸುತ್ತಿಲ್ಲ. ಹಾಲು ಪ್ಯಾಕಿಂಗ್ ಕೇಂದ್ರಗಳಲ್ಲಿ ಸ್ವಚ್ಛತೆ, ಹಾಲಿನ ಗುಣಮಟ್ಟ, ತೂಕ ಮತ್ತು ಅಳತೆಯ ಪ್ರಮಾಣ ಇನ್ನಿತರೆ ವಿಚಾರಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಈ ಕುರಿತು ಜಾಗೃತ ಅಧಿಕಾರಿಗಳು ಒಕ್ಕೂಟಕ್ಕೆ ವರದಿ ಸಲ್ಲಿಸಿದ್ದರೂ, ಈ ವರೆಗೂ ಅಧ್ಯಕ್ಷರು ದುರುದ್ದೇಶದಿಂದಲೇ ಗಮನ ನೀಡುತ್ತಿಲ್ಲ ಎಂದರು.

ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಎಚ್. ಹನುಮಂತಪ್ಪ ಅವರು, ಭೀಮಾನಾಯಕ್ ಅವರ ಆಡಳಿತಾವಧಿಯಲ್ಲಿಯೇ ಒಕ್ಕೂಟ ನಷ್ಟಕ್ಕೊಳಗಾಗಿದೆ. ಅಧಿಕಾರಿಗಳು ರಾಜಕಾರಣ ಮಾಡುತ್ತಿಲ್ಲ. ನಿವೃತ್ತ ಅಧಿಕಾರಿ ನಿರ್ದೇಶಕರಾಗಿ ಇಡೀ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಒಕ್ಕೂಟ ಮತ್ತು ಹಾಲು ಉತ್ಪಾದಕರು ನಷ್ಟಕ್ಕೊಳಗಾಗುತ್ತಾರೆ ಎಂದು ಹೇಳಿದರು.

ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರರೆಡ್ಡಿ ಅವರು, ಹಾಲಿ ಆಡಳಿತ ಮಂಡಲಿಯಲ್ಲಿ ಭೀಮಾನಾಯಕ್ ಅವರು ಸರ್ವಾಧಿಕಾರತ್ವ ತೋರುತ್ತಿದ್ದಾರೆ. ಅಧಿಕಾರಿಗಳು ಕರ್ತವ್ಯಲೋಪ ಮಾಡುವುದರ ಜೊತೆಯಲ್ಲಿ ಏಕಪಕ್ಷೀಯವಾಗಿ ವರ್ತಿಸುತ್ತಿದೆ. ಸರ್ಕಾರ ತಕ್ಷಣವೇ ಒಕ್ಕೂಟವನ್ನು ರಕ್ಷಿಸಬೇಕು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು ಮೋಕ, ಕಾರ್ಪೊರೇಟರ್ ಕೆ.ಎಸ್. ಅಶೋಕ್ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande