ಸಮೀಕ್ಷಾ ವರದಿಯ ವೈಜ್ಞಾನಿಕ ವಿಶ್ಲೇಷಣೆ ಸೂಕ್ತ : ಗುಂಡೂರಾವ್
ಬೆಂಗಳೂರು, 16 ಏಪ್ರಿಲ್ (ಹಿ.ಸ.) : ಆ್ಯಂಕರ್ : ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಆಧಾರದಲ್ಲಿ ಸಲ್ಲಿಸಿರುವ ಸಮೀಕ್ಷಾ ವರದಿಯನ್ನು ಪರಿಶೀಲಿಸಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ
Gundurao


ಬೆಂಗಳೂರು, 16 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಆಧಾರದಲ್ಲಿ ಸಲ್ಲಿಸಿರುವ ಸಮೀಕ್ಷಾ ವರದಿಯನ್ನು ಪರಿಶೀಲಿಸಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು,

ಸಾಮಾಜಿಕ ನ್ಯಾಯ ಮತ್ತು ಸಮಾನ ಬದುಕಿನ ಮೇಲೆ ನಮಗೆ ನಂಬಿಕೆಯಿದ್ದರೆ ಹಾಗೂ ಆ ತತ್ವಕ್ಕೆ ನಾವು ಬದ್ಧರಾಗಿದ್ದರೆ ಈ ಸಮೀಕ್ಷಾ ವರದಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಜೊತೆಗೆ ಈ ವರದಿಯು ತಾರ್ಕಿಕ ಅಂಶಗಳನ್ನು ಒಳಗೊಂಡಿದೆ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇನೆ.

ಆಯೋಗ ಸಲ್ಲಿಸಿರುವ ಸಮೀಕ್ಷಾ ವರದಿಗೆ ನನ್ನ ಸಂಪೂರ್ಣ ಅನುಮೋದನೆಯಿದೆ. ಸಚಿವ ಸಂಪುಟದಲ್ಲಿ ಈ ಸಮೀಕ್ಷಾ ವರದಿ ಮಂಡನೆಯಾಗಲಿದೆ. ಸಚಿವ ಸಂಪುಟವು ಈ ಸಮೀಕ್ಷಾ ವರದಿಯನ್ನು ಅಂಗೀಕರಿಸಿದ ಬಳಿಕ ವರದಿಯ ನ್ಯೂನತೆಗಳು ಹಾಗೂ ಪರಿಣಾಮಕಾರಿ ಅನುಷ್ಠಾನದ ಕುರಿತು ಮುಕ್ತ, ನ್ಯಾಯಯುತವಾದ ಚರ್ಚೆಗೆ ನಾಂದಿ ಹಾಡಬಹುದು.

ಆಯೋಗ ಶಿಫಾರಸ್ಸು ಮಾಡಿರುವ ಕೆಲ ಅಂಶಗಳನ್ನು ನಾನು ಗಮನಿಸಿದ್ದೇನೆ. ಈ ಅಂಶಗಳಿಂದ ಯಾವುದೇ ಸಮುದಾಯ ಅಸಮಾಧಾನಗೊಳ್ಳುವ ಅಗತ್ಯವಿಲ್ಲ. ಈ ಅಂಶಗಳು ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ ಎಂಬುದು ನನ್ನ ಭಾವನೆ.

ಕೆಲವರು ವರದಿಯನ್ನು ಓದದೆ ಜನರನ್ನು ತಪ್ಪುದಾರಿಗೆ ಎಳೆಯುವ ಯತ್ನ ‌ಮಾಡುತ್ತಿದ್ದಾರೆ‌. ಹಾಗಾಗಿ ನಾನು ಜನರಲ್ಲಿ ಮನವಿ‌ ಮಾಡಿಕೊಳ್ಳುವುದೇನೆಂದರೆ, ವರದಿಯ ಕುರಿತು ಈಗಲೇ ಅಂತಿಮ ತೀರ್ಮಾನಕ್ಕೆ ಬರುವುದು ಬೇಡ. ಅನಗತ್ಯ ಗೊಂದಲಗಳಿಗೆ ಆಸ್ಪದ ಕೊಡುವುದು ಬೇಡ. ಮೊದಲು ವರದಿಯನ್ನು ಓದೋಣ. ನಂತರ ಚರ್ಚೆಗೆ ನಮ್ಮ ಮನಸ್ಸನ್ನು ಮುಕ್ತವಾಗಿರಿಸಿಕೊಳ್ಳೋಣ. ವರದಿಯನ್ನು ಸಂಪೂರ್ಣವಾಗಿ ಓದದೆ ಅವೈಜ್ಞಾನಿಕ ಎನ್ನುವುದು ಆತುರದ ನಿರ್ಧಾರವಾಗುತ್ತದೆ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande