ಕೋಲಾರ, ೧೫ ಏಪ್ರಿಲ್ (ಹಿ.ಸ) :
ಆ್ಯಂಕರ್ : ಕೇವಲ ಸಾಮಾಜಿಕ ಸುಧಾರಕರ ಜನ್ಮ ದಿನಚಾರಣೆಗಳನ್ನು ಹೆಸರಿಗಷ್ಟೇ ಆಚರಣೆ ಮಾಡಿದರೆ ಸಾಲದು. ಬದಲಾಗಿ ಅವರ ಸಿದ್ದಾಂತ, ಆದರ್ಶಗಳನ್ನು ಪ್ರಾಮಾಣಿಕವಾಗಿ ಪಾಲಿಸಿದಾಗ ಮಾತ್ರ ರಾಷ್ಟçವು ಅಭಿವೃದ್ದಿಯ ಹಾದಿಯಲ್ಲಿ ಸಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಸುನೀಲ್ ಎಸ್ ಹೊಸಮನಿ ಹೇಳಿದರು.
ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ೧೩೪ನೇ ಜನ್ಮ ದಿನಚಾರಣೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಆರ್ ಅಂಬೇಡ್ಕರ್ ರವರ ಶ್ರಮದಿಂದಲೇ ಪ್ರತಿಯೊಬ್ಬರು ಶಿಕ್ಷಣ, ಉದ್ಯೋಗ ಹಾಗೂ ಸರ್ಕಾರದ ಯೋಜನೆಗಳನ್ನು ಪಡೆದು ಜೀವನದಲ್ಲಿ ನೆಮ್ಮದಿ ಜೀವನ ಹಾಗೂ ಅಭಿವೃದ್ದಿ ಸಾಧಿಸುವಂತಾಗಿದೆ ಎಂದರು.
ಪ್ರತಿಯೊಬ್ಬರು ಕನಿಷ್ಠ ಸಂವಿಧಾನ ಹಾಗೂ ಸಾಮಾನ್ಯ ಕಾನೂನುಗಳನ್ನು ತಿಳಿದುಕೊಂಡು, ಅದನ್ನು ಪಾಲಿಸುವ ಮೂಲಕ ಜೀವನವನ್ನು ಭದ್ರ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತರಬೇತಿ ಸಂಸ್ಥೆಯ ನಿರ್ದೇಶಕ ಯಲ್ಲೇಶ್ ಸಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರು ಜೀವಂತವಾಗಿಲ್ಲದಿದ್ದರು, ಅವರ ಅಪಾರ ಸೇವೆ, ಕೊಡುಗೆಗಳು ಸದಾ ಜನರ ಮನಸ್ಸಲ್ಲಿ ಶಾಶ್ವತ ಸ್ಥಾನ ಪಡೆದಿದೆ ಎಂದರು.
ಸಾಮಾಜಿಕ ಸುಧಾರಕರ ಜೀವನವೇ ನಮಗೆ ಆದರ್ಶವಾಗಬೇಕು. ಅವರು ಅನುಸರಿಸಿ, ಪಾಲಿಸಿದ ನೈತಿಕತೆ, ಮೌಲ್ಯಗಳು, ನಮ್ಮ ರಕ್ತದ ಪ್ರತಿ ಕಣ ಕಣದಲ್ಲೂ ಸೇರಬೇಕು ಹಾಗೂ ಅವರ ಸಿದ್ದಾಂತಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತರಬೇತುದಾರರಾದ ಕೆ.ವಿ ವಿಜಯ್ ಕುಮಾರ್, ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ, ಎನ್.ವಿ ನಾರಾಯಣಸ್ವಾಮಿ, ಕೆ.ಲೋಕೇಶ್, ಶೃತಿ, ಸಿಂಧೂಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ೧೩೪ನೇ ಜನ್ಮದಿನಚಾರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್