ಬೆಂಗಳೂರು, 31 ಮಾರ್ಚ್ (ಹಿ.ಸ.) :
ಆ್ಯಂಕರ್ : ದಾನಗಳಲ್ಲಿ ಶ್ರೇಷ್ಠವಾದ ಅಂಗಾಂಗ ದಾನಕ್ಕೆ ಪ್ರೋತ್ಸಾಹ ನೀಡಲು ವೈದ್ಯಕೀಯ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಸ್ಥಾಪಿಸಲು 1 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ತಿಳಿಸಿದ್ದಾರೆ.
ಈ ಯೋಜನೆಯು ನಾಲ್ಕರಿಂದ ಆರು ತಿಂಗಳ ಒಳಗಾಗಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದ್ದು, ಆಸ್ಪತ್ರೆಯಲ್ಲಿ ಐಸಿಯು, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಾಲಯ ಸೇರಿದಂತೆ ಸಂಪೂರ್ಣ ಸೌಲಭ್ಯಗಳೊಂದಿಗೆ ಈ ಕೇಂದ್ರ ಕಾರ್ಯನಿರ್ವಹಿಸಲಿದೆ.
ಈ ಆಸ್ಪತ್ರೆಯಲ್ಲಿ 70 ಐಸಿಯು ಹಾಸಿಗೆ, 1000 ಸಾಮಾನ್ಯ ಹಾಸಿಗೆ, 40 ಅಪಘಾತ ಚಿಕಿತ್ಸಾ ಹಾಸಿಗೆ ಹಾಗೂ ಅಂಗಾಂಗ ದಾನ ಪ್ರಕ್ರಿಯೆ ಸುಗಮಗೊಳಿಸಲು ಹೆಲಿಪ್ಯಾಡ್ ನಿರ್ಮಾಣಕ್ಕೆ ಯೋಜಿಸಲಾಗಿದೆ.
ಈ ಕೇಂದ್ರವು ಬಡ ರೋಗಿಗಳಿಗೆ ತುಂಬಾ ಅನುಕೂಲವಾಗಲಿದ್ದು, ಅಂಗಾಂಗ ದಾನ ಕಾರ್ಯಕ್ರಮವನ್ನು ಉತ್ತೇಜಿಸುವತ್ತ ಪ್ರಾಮುಖ್ಯ ಭೂಮಿಕೆ ವಹಿಸಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa