ಬಳ್ಳಾರಿ, 31 ಮಾರ್ಚ್ (ಹಿ.ಸ.) :
ಆ್ಯಂಕರ್ : ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಕಲಿಸಬೇಕಾದ ಅವಶ್ಯಕತೆಯೂ, ಅನಿವಾರ್ಯತೆಯೂ ಇದೆ ಎಂದು ಸಂಸ್ಕಾರ ಭಾರತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ. ಅಮರೇಶ್ ತಿಳಿಸಿದ್ದಾರೆ.
ಶಾಸ್ತ್ರಿನಗರದ ಬ್ಯಾಂಕ್ ಕಾಲೋನಿಯ ಉದ್ಯಾನವನದ ಬಯಲು ರಂಗವೇದಿಕೆಯಲ್ಲಿ ಸಂಸ್ಕಾರ ಭಾರತಿ ಜಿಲ್ಲಾ ಘಟಕವತಿ ಹಮ್ಮಿಕೊಂಡಿದ್ದ ಯುಗಾದಿ ಹಬ್ಬದ `ಚೈತ್ರದ ಚಿಗುರು'ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಮಕ್ಕಳು ಮತ್ತು ಯುವಪೀಳಿಗೆ ಸಂಸ್ಕಾರವಂತರಾಗಿ ಶಿಸ್ತನ್ನು ಅಳವಡಿಸಿಕೊಂಡಿದ್ದಲ್ಲಿ ಮಾತ್ರ ಅವರಿಂದ ಉತ್ತಮವಾದ ಸಮಾಜ ನಿರ್ಮಾಣದ ಜವಾಬ್ದರಿಯನ್ನು ನಿರ್ವಹಿಸುವ ನಿರೀಕ್ಷೆ ಮಾಡಲು ಸಾಧ್ಯ. ಕಾರಣ ಪೆÇೀಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು.
ಸಂಸ್ಕಾರ ಭಾರತಿ ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾರ್ಥನೆ ಮತ್ತು ಧ್ಯೇಯ ಗೀತೆಯನ್ನು ಶ್ರೀಮತಿ ಲಕ್ಷ್ಮಿ ಪವನ್ ಕುಮಾರ್ ಅವರು ಹಾಡಿದರು. ಶ್ರೀಮತಿ ಶಶಿಕಲಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪನ್ಯಾಸಕ ಎ.ಎಂ.ಪಿ. ವೀರೇಶಸ್ವಾಮಿ ಅವರು `ಭಾರತದ ಭವ್ಯ ಪರಂಪರೆ ಹಾಗೂ ಯುಗಾದಿ ಹಬ್ಬ'ದ ಕುರಿತು ಉಪನ್ಯಾಸ ನೀಡಿದರು.
ಮಹಾಂತಯ್ಯನ ಮಠ ಮತ್ತು ಶಿವೇಶ್ವರಗೌಡ ಕಲ್ಲುಕಂಭ ಅವರು ವೇದಿಕೆಯಲ್ಲಿದ್ದರು. ಜಾನಪದ ಕಲಾವಿದರಾದ ಯಲ್ಲನಗೌಡ ಶಂಕರಬಂಡೆ ಹಾಗೂ ಎಮ್ಮಿಗನೂರು ಜಡೇಶ್ ಕುವೆಂಪು ಅವರ ಭಾವಗೀತೆಗಳನ್ನು ಹಾಡಿದರು. ವಿಷ್ಣು ಹಡಪದ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ರಂಗೈಕ್ಯರಾದ ಜೋಯಿಸ್ ವೆಂಕೋಬಾಚಾರ್ಯ, ಮೇಕಪ್ ಕಲಾವಿದ ಶ್ರೀರಾಮುಲು ಅವರ ಆತ್ಮಕ್ಕೆ ಶಾಂತಿ ಕೋರಿ, ಮೌನಾಚರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್