ಗದಗ, 10 ಮಾರ್ಚ್ (ಹಿ.ಸ.) :
ಆ್ಯಂಕರ್ : ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ ಕಾವೆಂಶ್ರೀ ಅವರು ಇಂದು ವಿಧಿವಶರಾಗಿದ್ದಾರೆ. ಸತತ 25 ವರ್ಷಗಳಿಂದ ಕಲಾಚೇತನ ಸಂಸ್ಥೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಹೋಟೆಲ್ ಉದ್ಯಮದಲ್ಲಿ ತಮ್ಮದೇ ಆದ ಸೇವೆಯಲ್ಲಿ ಕಾವೇಂಶ್ರೀ ಅವರು ತೊಡಗಿಸಿಕೊಂಡಿದ್ದರು.
ಕಲಾಪೋಷಣೆಯನ್ನ ತಪಸ್ಸಿನಂತೆ ಮಾಡುತ್ತಿದ್ದ ಅವರು, ಪ್ರಧಾನಿ ನರೇಂದ್ರ ಮೋದಿಯವರ 2022 ರ ಡಿ.25 ರ 96 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಾವೆಂಶ್ರೀ ಅವರ ಕಲಾಸೇವೆಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ, ಕಾವೇಂಶ್ರೀ ಬಳಿಕ ಹೋಟೆಲ್ ಉದ್ಯಮಿಯಾಗಿ ಗದಗ ನಗರದಲ್ಲಿ ನೇಸರ ಹೋಟೆಲ್ ನಡೆಸುತ್ತಿದ್ದರು.
ಕಲಾಚೇತನ ಸಂಸ್ಥೆ ಹುಟ್ಟುಹಾಕಿ,ಅಂದಿನಿಂದಲೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸಿ ಕರ್ನಾಟಕದ ಸಂಸ್ಕೃತಿ ಮತ್ತು ಮತ್ತು ಕಲಾಪರಂಪರೆ ಪೋಷಿಸುವ ಬದ್ಧತೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಪ್ರಧಾನಿ ಮೋದಿಯವರು ತಮ್ಮ ಮನ್ ಕಿ ಬಾತ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದರಿಂದ ಸಾಕಷ್ಟು ಹರ್ಷಿತರಾಗಿದ್ದ ಕಾವೇಂಶ್ರೀ ಅವರು, ಕಲಾಚೇತನ ಅಕಾಡೆಮಿ ಕೆಲಸವನ್ನು ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದು ಹಾಗೂ ನಮ್ಮ ಕೆಲಸವನ್ನು ಇಡೀ ದೇಶವೇ ಗುರುತಿಸುವಂತೆ ಮಾಡಿದ್ದು ಸಂಸ್ಥೆಗೆ ಸಿಕ್ಕ ಗೌರವವೆಂದೇ ಭಾವಿಸಿದ್ದೇನೆ. ಇದರಿಂದ ನಮ್ಮ ಜವಾಬ್ದಾರಿ ಹೆಚ್ಚಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದರು.ಆದರೆ ಆ ಸಂತಸ ದಿನಗಳಿಂದ ಕಾವೇಂಶ್ರೀ ಅವರು ಬಹಳ ಬೇಗ ದೂರವಾಗಿದ್ದು ನಿಜಕ್ಕೂ ದುಃಖದ ಸಂಗತಿಯಾಗಿದೆ.
ಅಪಾರ ಸ್ನೇಹಬಳಗವನ್ನ ಹೊಂದಿದ್ದ ಕಾವೇಂಶ್ರೀ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದ್ದು, ಎಂತಹ ಅಪರಿಚಿತರಲ್ಲೂ ಅವರ ಆತ್ಮೀಯತೆ ನಡೆ, ಸ್ನೇಹಮಯ ವ್ಯಕ್ತಿತ್ವ ಇದೀಗ ದೂರವಾಗಿದೆ.
ಕಳೆದ ಎರೆಡ್ಮೂರು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾವೇಂಶ್ರೀ ಇಂದು ಬೆಳಿಗ್ಗೆ ಗದಗನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾವೇಂಶ್ರೀ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯು ಇಂದು ಸಂಜೆ ಸಾಗರದ ಕಾಳ್ಮಂಜಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / Lalita MP