


ಕೊಪ್ಪಳದ ಸಂಸ್ಥಾನ ಗವಿಮಠದ ಬೆಟ್ಟದ ಮೇಲಿರುವ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪ್ರತೀ ವರ್ಷವೂ ಜಾತ್ರೆಗೆ ಮುನ್ನ ಬರುವ ಮಂಗಳವಾರ ಅಥವಾ ಶುಕ್ರವಾರ ದಿನದಂದು ನಡೆಯುವ ‘ಉಡಿ ತುಂಬುವ’ ಕಾರ್ಯಕ್ರಮ ಜರುಗುತ್ತದೆ.
ಈ ವರ್ಷ ದಿನಾಂಕ 02-01-2026 ಶುಕ್ರವಾರದಂದು ಜರುಗಲಿದ್ದು, ಈ ಒಂದು ಕಾರ್ಯಕ್ರಮ ಗವಿಮಠದ ಐತಿಹಾಸಿಕ ಪರಂಪರೆ.
ಗವಿಮಠದ ಅನ್ನಪೂರ್ಣೇಶ್ವರಿ ದೇವಸ್ಥಾನವು ಕೇವಲ ಒಂದು ಪೂಜಾ ಸ್ಥಳವಲ್ಲ; ಅದು ಅನ್ನ, ಸೇವೆ ಮತ್ತು ಮಾನವೀಯತೆಯ ಶಾಶ್ವತ ಮೌಲ್ಯಗಳನ್ನು ಪ್ರತಿಬಿಂಬಿಸುವ ಸಾಂಸ್ಕತಿಕ ಕೇಂದ್ರೀಯ ಸ್ಥಳವಾಗಿದೆ. ಇಲ್ಲಿ ನಡೆಯುವ ‘ಉಡಿ ತುಂಬುವ’ ಕಾರ್ಯಕ್ರಮ ಗವಿಮಠದ ಐತಿಹಾಸಿಕ, ಧಾರ್ಮಿಕ ನಂಬಿಕೆ ಮತ್ತು ಸಮಾಜಮುಖಿ ಚಿಂತನೆಯ ಪ್ರತೀಕವಾಗಿ ಇಂದು ಕೂಡ ಅಚಲವಾಗಿ ಮುಂದುವರಿಯುತ್ತಿದೆ.
‘ಉಡಿ ತುಂಬುವುದು’ ಎಂಬ ಪದವೇ ಭಾರತೀಯ ಸಂಸ್ಕೃತಿಯಲ್ಲಿ ನಾಡಿನ ಸಮೃದ್ಧಿ, ಸಂತಾನಾಭಿವೃದ್ಧಿ, ಅನ್ನಪೂರ್ಣತೆಯ ಸಂಕೇತವಾಗಿದೆ. ಗವಿಮಠದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಈ ಕಾರ್ಯಕ್ರಮವು ಜಾತ್ರೆಗೆ ಪೂರ್ವಭಾವಿಯಾಗಿ ನಡೆಯುವುದು ಕೇವಲ ಆಚರಣೆಯಲ್ಲ; ಅದು ಶತ-ಶತಮಾನಗಳಿಂದ ಬೆಳೆದು ಬಂದ ಸಾಮಾಜಿಕ ಸಮಾನತೆಯ ಸಂವೇದನೆಯ ಅಭಿವ್ಯಕ್ತಿಯಾಗಿದೆ. ಗವಿಮಠದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಜಾತ್ರೆಗೆ ಮುನ್ನ ನಡೆಯುವ ಉಡಿ ತುಂಬುವ ಕಾರ್ಯಕ್ರಮವು ಕೇವಲ ಒಂದು ಧಾರ್ಮಿಕ ವಿಧಿಯಲ್ಲ; ಅದು ಅನ್ನ, ಸೇವೆ ಮತ್ತು ಮಾನವೀಯತೆಯ ಅಂಶಗಳಿಂದ ಕೂಡಿದ ಮೇಳವಾಗಿದೆ. ಈ ಐತಿಹಾಸಿಕ ಪರಂಪರೆ ಮುಂದಿನ ತಲೆಮಾರಿನ ಪೀಳಿಗೆಗೂ ಕೂಡಾ ಸುಖಪ್ರದವಾಗಲಿ ಎಂಬ ಆಶಯ. ಅನ್ನಪೂರ್ಣೇಶ್ವರಿ ದೇವಿಯ ಕೃಪೆಯಿಂದ ಹಸಿವು ಇಲ್ಲದ ಸಮಾಜ ನಿರ್ಮಾಣವಾಗಲಿ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಶಾಶ್ವತವಾಗಿ ಸಾರುತ್ತಲೇ ಇದೆ. ಇಲ್ಲಿ ಅನ್ನವೇ ಆರಾಧನೆ.
ಅನ್ನಪೂರ್ಣತೆಯ ತತ್ವದಲ್ಲಿ ಹುಟ್ಟಿದ ಪರಂಪರೆ
ಗವಿಮಠದ ಪರಂಪರೆಯನ್ನು ಅವಲೋಕಿಸಿದಾಗ, ಈ ಉಡಿ ತುಂಬುವ ಸಂಪ್ರದಾಯದ ಹಿಂದೆ ಇರುವ ತತ್ವ ಸ್ಪಷ್ಟವಾಗಿ ಗೋಚರಿಸುತ್ತದೆ. ಅದು ಬರ, ದುರಭಿಕ್ಷ, ಹಸಿವು ಮತ್ತು ನಿರಾಶೆಯಿಂದ ಬಳಲುತ್ತಿದ್ದ ಸಮಾಜದ ನಡುವೆ ಹುಟ್ಟಿದ ಮಾನವೀಯ ಪ್ರತಿಕ್ರಿಯೆ. ಈ ಸಂಪ್ರದಾಯವು ದಾನ ಮತ್ತು ಭಕ್ತಿಯನ್ನು ಮಾತ್ರವಲ್ಲ, ಸಮಾನತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಕೂಡ ಬೋಧಿಸುತ್ತದೆ.ಜಾತ್ರೆಯ ಸಂಭ್ರಮದ ಹಿಂದೆ ಇರುವ ಈ ಉಡಿ ತುಂಬುವ ಕಾರ್ಯಕ್ರಮವೇ ಗವಿಮಠದ ಸಾಮಾಜಿಕ ಧ್ಯೇಯವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ವೈಚಾರಿಕತೆಯ ದೃಷ್ಟಿಕೋನದಿಂದ ಅದು ಅನ್ನದೇವರ ಮುಂದೆ ಮಾನವನ ತಲೆಬಾಗುವ ಕ್ಷಣ, ಶ್ರೀಮಂತ–ಬಡವ ಬೇಧ ಕರಗುವ ಸಮಯ. ‘ನನ್ನದು’ ಎಂಬುದು ‘ನಮ್ಮದು’ ಆಗುವ ಸಂಸ್ಕಾರ. ಉಡಿಯಲ್ಲಿ ಬೀಳುವ ಧಾನ್ಯ ಒಂದು ಕೈಯಿಂದ ಬಂದರೂ ಅದು ನಾಡಿನ ಹೊಟ್ಟೆ ತುಂಬಿಸುತ್ತದೆ. ಕವಿತೆಯಾಗಿ ಉಳಿಯುವ ಸಂಪ್ರದಾಯ. “ಹಸಿದವನಿಗೆ ಅನ್ನವೇದೇವರು” ಎಂಬ ಮೌಲ್ಯವನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದಲೇ ಈ ಆಚರಣೆ ರೂಪುಗೊಂಡಿತು. ಪೀಠಾಧಿಪತಿಗಳ ದಾರ್ಶನಿಕ ಚಿಂತನೆ, ಅನ್ನವಿಲ್ಲದ ಭಕ್ತಿಗೆ ಅರ್ಥವಿಲ್ಲ. ಸೇವೆಯಿಲ್ಲದ ಧರ್ಮ ಅಪೂರ್ಣ, ಈ ಉಡಿ ತುಂಬುವ ಕಾರ್ಯಕ್ರಮಕ್ಕೆ ಶಾಶ್ವತ ಅರ್ಥ ನೀಡಿತು.
ಐತಿಹಾಸಿಕ ಹಿನ್ನೆಲೆ
ಗವಿಮಠದ ಶಿವಯೋಗಿಗಳು ಹಿಂದಿನಿಂದಲೂ ಅನ್ನದಾಸೋಹದ ಮಹತ್ವವನ್ನು ಅವರ ಕಾಯಕದ ಮೂಲ ತತ್ವವಾಗಿ ಪರಿಗಣಿಸಿದ್ದರು. ಜನರನ್ನು ಅನೇಕ ಸಮಸ್ಯೆಗಳನ್ನು ಕಾಡುತ್ತಿದ್ದ ಕಾಲಘಟ್ಟದಲ್ಲಿ, “ ಹಸಿದವರಿಗೆ ಉಣಿಸುವ” ಎಂಬ ದಾರ್ಶನಿಕ ನಂಬಿಕೆಯೇ ಉಡಿ ತುಂಬುವ ಸಂಪ್ರದಾಯಕ್ಕೆ ಜೀವ ತುಂಬಿತು. ಈ ಒಂದು ಆರ್ಥಗರ್ಭಿತ ಮಾತಿನ ತಾತ್ಪರ್ಯದಂತೆ ಪೂರ್ವ ಶಿವಯೋಗಿಗಳ ಕಾಲದಿಂದಲೂ ಜಾತ್ರೆಗೆ ಮುನ್ನ ದೇವಿಗೆ ಅನ್ನ, ಧಾನ್ಯ, ಹಣ್ಣು-ಹಂಪಲುಗಳನ್ನು ಅರ್ಪಿಸುವ ಮೂಲಕ, ಜಾತ್ರೆ ಸಂಪನ್ನವಾಗಲಿ ಸಮಾಜ ನಾಡು ಸಮೃದ್ಧಿಯಾಗಲಿ ಎಂಬ ಸಂದೇಶವನ್ನು ಈ ಧಾರ್ಮಿಕ ಕಾರ್ಯಕ್ರಮ ನೀಡುತ್ತದೆ. ಆದರೆ ಇಂದು ಹಾಗೆ ನೋಡಿದರೆ ಇದು ಇತಿಹಾಸವಲ್ಲ, ಒಂದು ಜೀವಂತದೃಶ್ಯ ಹಸಿರು ಬಳೆಯ ಧ್ವನಿ, ಅಕ್ಕಿಯ ಸದ್ದು, ಹೂವಿನ ಪರಿಮಳ. ಮಾತೆಯರು ಉಡಿಯನ್ನು ತುಂಬಿಸಿಕೊಳ್ಳುವುದರ ಮೂಲಕ ಮಗನ/ಮಗಳ ಉದ್ಯೋಗ, ಮಗನ/ಮಗಳ ಮದುವೆ, ಮಗಳು ಮತ್ತು ಸೊಸೆಯ ಮಡಿಲು ತುಂಬುವ, ಹಸುಗಳ ಆರೋಗ್ಯ, ಮಳೆಗಾಗಿ ಕಾಯುವ ರೈತನಿಗೆ ಅಭಯ ಹಸ್ತ, ಹೊಲಗಳಲ್ಲಿ ಸಮೃದ್ಧ ಬೆಳೆ ಮುಂತಾದ ಕಲ್ಯಾಣ ಕಾರ್ಯಗಳ ಹರಕೆಯೇ ಅಮ್ಮನ ಈ ಉಡಿ ತುಂಬುವ ಈ ಕಾರ್ಯಕ್ರಮದ ಮೂಲಕ ಭಕ್ತರು ತಮ್ಮ ಶ್ರಮದ ಫಲವನ್ನು ದೇವಿಗೆ ಸಮರ್ಪಿಸಿ, ಅದನ್ನು ಸಮುದಾಯದ ಹಿತಕ್ಕಾಗಿ ಬಳಸುವ ಪರಂಪರೆ ಆರಂಭವಾಯಿತು. ಕಾಲಕ್ರಮೇಣ ಇದು ಸಮೂಹದ ಸಹಭಾಗಿತ್ವದ ಹಬ್ಬವಾಗಿ ರೂಪುಗೊಂಡಿತು. ಸಾಮಾಜಿಕ ಮತ್ತು ಧಾರ್ಮಿಕ ಮಹತ್ವ ಉಡಿ ತುಂಬುವ ಕಾರ್ಯಕ್ರಮವು ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯ ಮೂಲಕ ವಿಶೇಷ ಅರ್ಥವನ್ನು ಪಡೆದುಕೊಂಡಿದೆ. ಮನೆ ಮನೆಗಳಿಂದ ತರಲಾಗುವ ಧಾನ್ಯ, ನೈವೇದ್ಯಗಳು ದೇವಿಗೆಅರ್ಪಿಸಲ್ಪಟ್ಟು, ನಂತರ ಅನ್ನದಾಸೋಹ ರೂಪದಲ್ಲಿ ಸಾವಿರಾರು ಜನರಿಗೆ ಹಂಚಲ್ಪಡುತ್ತವೆ. ಇದು ದೇವಿ ಅನ್ನಪೂರ್ಣೇಶ್ವರಿ ಕೇವಲ ಪೂಜೆಗೆ ಮಾತ್ರವಲ್ಲ, ಜನರ ಬದುಕಿಗೆ ಅನ್ನದರೂಪದಲ್ಲಿ ಇಳಿದು ಬರುವ ಶಕ್ತಿಯೆಂಬ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ.
ಇಂದಿನ ಸಂದರ್ಭದಲ್ಲಿ ಈ ಕಾರ್ಯಕ್ರಮದ ಮಹತ್ವ
ಆಧುನಿಕ ಯುಗದಲ್ಲಿಯೂ ಗವಿಮಠದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆಯುವ ಉಡಿ ತುಂಬುವ ಕಾರ್ಯಕ್ರಮ ತನ್ನ ಮೂಲ ಅಸ್ತಿತ್ವ ಹಾಗೂ ತತ್ವವನ್ನು ಕಳೆದುಕೊಳ್ಳದೆ ಮುಂದುವರಿಯುತ್ತಿದೆ. ಇದು ಪೀಳಿಗೆಯಿಂದ ಪೀಳಿಗೆಗೆ ವರ್ಗ ಮಾಡಲ್ಪಟ್ಟ ಒಂದು ಸಾಂಸ್ಕೃತಿಕ ಸಂಪತ್ತಾಗಿದೆ. ಇಂದಿನ ಯುವಪೀಳಿಗೆಗೆ ಸೇವೆ, ತ್ಯಾಗ ಮತ್ತು ಸಮಾಜದ ಹೊಣೆಗಾರಿಕೆಯನ್ನು ಕಲಿಸುವ ಜೀವಂತ ಪಾಠವಾಗಿದೆ.ಉಡಿ ತುಂಬುವ ದಿನ ಗವಿಮಠದ ಆವರಣದಲ್ಲಿ ಮೂಡುವ ದೃಶ್ಯವೇ ಒಂದು ಮನಮೋಹಕವಾದುದು. ಕೈಯಲ್ಲಿ ಉಡಿಗಳನ್ನು ಹಿಡಿದ ತಾಯಂದಿರ ಸಾಲು, ಕಣ್ಣು ತುಂಬಿ ಹರಿಯುವ ಭಕ್ತಿ, ಮನಸ್ಸು ತುಂಬಿದ ಕೃತಜ್ಞತೆ, ಇವೆಲ್ಲವೂ ಸೇರಿ ಅನ್ನಪೂರ್ಣೇಶ್ವರಿ ದೇವಿಯನ್ನು ಕೇವಲ ಮೂರ್ತಿಯಾಗಿ ಅಲ್ಲ, ತಾಯಿಯಾಗಿ ಅನುಭವಿಸುವ ಕ್ಷಣಗಳಾಗುತ್ತವೆ.
ಮಹಿಳೆಯರ ಉಡಿಯಲ್ಲಿತುಂಬಿದ ಆಶೀರ್ವಾದ ಉಡಿ ತುಂಬುವ ಕಾರ್ಯಕ್ರಮದ ಹೃದಯ ಮಹಿಳೆಯರು. ತಾಯಿಯ ಉಡಿ ಹೇಗೆ ಕುಟುಂಬದ ಸಮೃದ್ಧಿಯ ಸಂಕೇತವೋ, ಹಾಗೆಯೇ ಅನ್ನಪೂರ್ಣೇಶ್ವರಿ ದೇವಿಯ ಉಡಿಯೂ ಕುಟುಂಬದ, ಸಮಾಜದ ಸಮೃದ್ಧಿಯ ಪ್ರತೀಕ. ಮಹಿಳೆಯರ ಕೈಯಿಂದ ತುಂಬುವ ಉಡಿಯ ಧಾನ್ಯವು ಕೇವಲ ಅನ್ನವಲ್ಲ; ಅದು ಆಶೀರ್ವಾದ, ಸಹನೆ, ತ್ಯಾಗ ಮತ್ತು ಪ್ರಾರ್ಥನೆಯ ರೂಪ.ಈ ಸಂಪ್ರದಾಯದಲ್ಲಿ ಮಹಿಳೆಯರು ದೇವಿಗೆ ಅನ್ನ ಅರ್ಪಿಸುವುದರ ಮೂಲಕ “ಹಸಿವು ಇಲ್ಲದ ಮನೆ, ಅಸಹಾಯಕರಿಲ್ಲದ ಸಮಾಜ ನಿರ್ಮಾಣವಾಗಲಿ” ಎಂಬ ಹೃದಯಪೂರ್ವಕ ಭಾವನೆಯನ್ನು ಭಕ್ತಿಯ ಮೂಲಕ ಮೌನವಾಗಿ ವ್ಯಕ್ತಪಡಿಸುತ್ತಾರೆ. ಈ ದೃಶ್ಯವೇ ಉಡಿ ತುಂಬುವ ಕಾರ್ಯಕ್ರಮಕ್ಕೆ ಭಾವನಾತ್ಮಕ ಆಳವನ್ನು ನೀಡುತ್ತದೆ.
ಅನ್ನಪೂರ್ಣೇಶ್ವರಿ ದೇವಿಯು ಇಲ್ಲಿ ಕೇವಲ ಪೂಜೆಗೆ ಸೀಮಿತವಾಗದೆ, ಅನ್ನದ ರೂಪದಲ್ಲಿ ನೇರವಾಗಿ ಜನರ ಬದುಕಿಗೆ ಜೀವದ ಪ್ರಾಣವಾಗಿ ಇಳಿದು ಬರುತ್ತಾಳೆ. ಪೂಜ್ಯರ ಪ್ರಕಾರ ಹಸಿದ ಹೊಟ್ಟೆಗೆ ಅನ್ನ ನೀಡುವದೇ ಶ್ರೇಷ್ಠ ಪೂಜೆ. ಅನ್ನ ನೀಡುವದು ಇಂದಿಗೂ ಎಂದಿಗೂ ಜೀವಂತವಾಗಿರುವ ಮೌಲ್ಯ. ಇರಕಲ್‍ಗಡದ ಅಮ್ಮನವರ ನೇತೃತ್ವದಲ್ಲಿ ನಡೆಯುವ ಉಡಿ ತುಂಬುವ ಕಾರ್ಯಕ್ರಮವು ಸ್ಥಳೀಯರ, ಸುತ್ತಮುತ್ತಲಿನ ಹಳ್ಳಿಗಳ ದೈವರಾಧನೆ ಸಂಪ್ರದಾಯ, ಒಂದು ವಿಶಿಷ್ಟ ಧಾರ್ಮಿಕ ಆಚರಣೆಯಾಗಿದೆ. ಭಕ್ತರಿಗೆ ದೇವಿಯ ಪ್ರೀತಿ ಮತ್ತು ಆಶೀರ್ವಾದವನ್ನು ನೀಡುವ ಭಾವನೆ, ಕಾರ್ಯಕ್ರಮದ ವೈಶಿಷ್ಟ್ಯವೆಂದು ನಂಬಲಾಗಿದೆ. ಇಂದು ಕೂಡ ಈ ಕಾರ್ಯಕ್ರಮ ಜನರ ಜೀವನ ಉಸಿರಾಗಿ ಬದುಕುತ್ತಿದೆ. ಇಂತಹ ಸಂಪ್ರದಾಯಗಳನ್ನು ದಾಖಲಿಸುವುದು ಕೇವಲ ಧಾರ್ಮಿಕಕರ್ತವ್ಯವಲ್ಲ; ಅದು ನಮ್ಮ ಜನಸ್ಮೃತಿಯನ್ನು ಉಳಿಸುವ ಸಾಂಸ್ಕøತಿಕ ಜವಾಬ್ದಾರಿ. ಅಮ್ಮನ ಉಡಿಯಲ್ಲಿ ತುಂಬುವ ಧಾನ್ಯಕ್ಕಿಂತ ನಮಗೆ ತಾಯಿ ಒಳ್ಳೆಯದನ್ನು ಮಾಡುತ್ತಾಳೆ ಎನ್ನುವ ನಂಬಿಕೆ ಇನ್ನೂ ದೊಡ್ಡದು.
ಉಪಸಂಹಾರ
ಅನ್ನಪೂರ್ಣೇಶ್ವರಿದೇವಿಯ ಉಡಿ ಸದಾ ತುಂಬಿರಲಿ, ಸಮಾಜದ ಯಾವುದೇ ಮೂಲೆಯಲ್ಲೂ ಹಸಿವು ಇರದಿರಲಿ, ಈ ಆಶಯವೇ ಈ ಪರಂಪರೆಯ ನಿಜವಾದ ಸಾರ. ಅನ್ನಪೂರ್ಣೆಶ್ವರಿ ಅಮ್ಮನವರ ಉಡಿ ತುಂಬುವ ವೈಶಿಷ್ಟ್ಯ ಕುರಿತು ನಾವು ಪಡೆದ ಅನುಭವ ಮತ್ತು ಹಲವು ಭಕ್ತರ ನಂಬಿಕೆ ಅನನ್ಯ. ಉಡಿ ತುಂಬುವ ಸಮಾನತೆಯ ಸಹೋದರತೆಯ ಸಹಜ ಲಕ್ಷಣಗಳನ್ನು ಉಳ್ಳುವ ಕಾರ್ಯಕ್ರಮಕ್ಕೆ ಬನ್ನಿ, ನಿಮ್ಮವರನ್ನೂ ಕರೆತನ್ನಿ, ಎಲ್ಲರೂ ಈ ಒಂದು ಭವ್ಯತೆಗೆ ಸಾಕ್ಷಿಯಾಗೋಣ
“ಅಮ್ಮನ ಉಡಿ ತುಂಬಿದರೆ, ಊರಿನ ಉಡಿ ತುಂಬುತ್ತದೆ, ಊರಿನ ಉಡಿ ತುಂಬಿದರೆ ಭಕ್ತರ ಬದುಕು ತುಂಬುತ್ತದೆ.”
ಲೇಖಕರು:
ಡಾ.ಶೈಲಜಾ ಅರಳಲೇಮಠ
ಸಹಾಯಕ ಪ್ರಾಧ್ಯಾಪಕರು
ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ,(ಬಿ.ಇಡಿ)
ಕೊಪ್ಪಳ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್