
ರಾಯ್‌ಪುರ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮಾನವ ಸಂವೇದನೆ ಮತ್ತು ಸಾಮಾಜಿಕ ಕಾಳಜಿಗಳಿಲ್ಲದೆ ಬದುಕುವುದು ಕಷ್ಟ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಹೇಳಿದರು.
ಸಮಾಜದ ದಿಕ್ಕು ರೂಪಿಸುವಲ್ಲಿ ಯುವಜನರ ಪಾತ್ರ ನಿರ್ಣಾಯಕವಾಗಿದ್ದು, ವೃತ್ತಿಜೀವನದ ಜೊತೆಗೆ ಸಾಂಸ್ಕೃತಿಕ ಪ್ರಜ್ಞೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಜೀವಂತವಾಗಿಟ್ಟುಕೊಳ್ಳಬೇಕೆಂದು ಅವರು ಕರೆ ನೀಡಿದರು.
ಛತ್ತಿಸಗಢದರಾಯ್‌ಪುರ ನಗರದ ಏಮ್ಸ ಸಭಾಂಗಣದಲ್ಲಿ ನಡೆದ ಯುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ, ಪರಿಸರ–ಅಭಿವೃದ್ಧಿಯ ಸಮತೋಲನ, ಕುಟುಂಬ ಜ್ಞಾನೋದಯ ಹಾಗೂ ‘ಪಂಚ ಪರಿವರ್ತನ’ದ ಐದು ಆಯಾಮಗಳ ಕುರಿತು ವಿವರಿಸಿದರು.
ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ನವೋದ್ಯಮ ಉದ್ಯಮಿಗಳು ಹಾಗೂ ಸಾಮಾಜಿಕ ವಲಯದವರನ್ನು ಒಳಗೊಂಡಂತೆ ಸುಮಾರು 2,000 ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪರಿಸರ ಮತ್ತು ಅಭಿವೃದ್ಧಿಯ ಕುರಿತು ಮಾತನಾಡಿದ ಡಾ. ಭಾಗವತ್, ಮೂಲಸೌಕರ್ಯ ವೃದ್ಧಿ ಮತ್ತು ಪ್ರಕೃತಿ ಸಂರಕ್ಷಣೆ ಎರಡನ್ನೂ ಸಮಾನಾಂತರವಾಗಿ ಸಾಧಿಸುವ ಸಮತೋಲಿತ ಮಾದರಿಯನ್ನು ಜಗತ್ತು ಇನ್ನೂ ಕಂಡು ಹಿಡಿದಿಲ್ಲ ಎಂದು ಹೇಳಿದರು.
ಅರಾವಳಿ ಪರ್ವತಗಳ ಉದಾಹರಣೆ ನೀಡಿ, ಪರಿಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿ ಸಾಧ್ಯವಾಗುವ ಪರ್ಯಾಯ ಮಾರ್ಗವನ್ನು ಹುಡುಕುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಯುವಕರಲ್ಲಿ ಹೆಚ್ಚುತ್ತಿರುವ ಒಂಟಿತನ ಮತ್ತು ಮಾದಕ ವ್ಯಸನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕುಟುಂಬದೊಳಗಿನ ಸಂವಹನ ಕುಸಿತವೇ ಈ ಸಮಸ್ಯೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಿದರು. ಕುಟುಂಬಗಳು ಯುವಕರಿಗೆ ಹೆಚ್ಚು ಸಮಯ ನೀಡಬೇಕು; ಸಮಾಜವು ಪರಸ್ಪರ ಸೂಕ್ಷ್ಮತೆ ಮತ್ತು ಬೆಂಬಲವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಧಾರ್ಮಿಕ ಮತಾಂತರ ವಿಷಯದಲ್ಲಿ, ಗೌರವ ಮತ್ತು ಪ್ರೀತಿಯೊಂದಿಗೆ ಜನರನ್ನು ತಲುಪಬೇಕು; ಆತ್ಮವಿಶ್ವಾಸ ತುಂಬುವ ಮೂಲಕ ಅವರು ತಮ್ಮ ಮೂಲ ಸ್ವಭಾವದತ್ತ ಮರಳಲು ನೆರವಾಗಬೇಕು ಎಂದು ಹೇಳಿದರು. ದೇವಾಲಯಗಳ ಆಡಳಿತ ಕುರಿತು ಮಾತನಾಡಿದ ಅವರು, ದೇವಾಲಯಗಳು ಅವುಗಳ ಮಾಲೀಕರ ನಿಯಂತ್ರಣದಲ್ಲಿರಬೇಕು ಎಂಬ ಅರಿವು ಜನರಲ್ಲಿ ಹೆಚ್ಚುತ್ತಿದೆ; ಈ ಸಂಬಂಧ ಕಾನೂನು ಕ್ರಮಗಳೂ ಮುಂದುವರಿದಿವೆ ಎಂದು ಹೇಳಿದರು.
ಭ್ರಷ್ಟಾಚಾರ ಮತ್ತು ಸಾಮಾಜಿಕ ಅನಿಷ್ಟಗಳ ನಿರ್ಮೂಲನೆ ಕೇವಲ ಕಾನೂನಿನ ಮೂಲಕವಲ್ಲ, ವ್ಯಕ್ತಿತ್ವ ನಿರ್ಮಾಣದ ಮೂಲಕವೂ ಸಾಧ್ಯವೆಂದು ತಿಳಿಸಿದ ಅವರು, ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಯುವಕರಿಗೆ ಕರೆ ನೀಡಿದರು. ಸಾಮಾಜಿಕ ಮಾಧ್ಯಮದ ಅತಿಯಾದ ಪ್ರಭಾವ, ಮಾದಕ ದ್ರವ್ಯ ಸೇವನೆ ಮತ್ತು ಸಾಮಾಜಿಕ ವಿಘಟನೆಗೆ ಕಾರಣವಾಗುವ ಅಂಶಗಳ ವಿರುದ್ಧ ಎಚ್ಚರಿಕೆ ನೀಡಿದರು.
‘ಪಂಚ ಪರಿವರ್ತನ’ದ ಅಡಿಯಲ್ಲಿ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಜ್ಞಾನೋದಯ, ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಕರ್ತವ್ಯಗಳ ಮಹತ್ವವನ್ನು ವಿವರಿಸಿದ ಅವರು, ಹಿಂದುತ್ವವು ಸಂಕುಚಿತ ಧಾರ್ಮಿಕ ಗುರುತಲ್ಲ; ಎಲ್ಲರನ್ನೂ ಒಳಗೊಂಡ ಜೀವನ ವಿಧಾನವೆಂದು ಸ್ಪಷ್ಟಪಡಿಸಿದರು. ಭಾರತೀಯ ಶಾಸ್ತ್ರೀಯ ಸಂಗೀತ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವಂತೆ ಯುವಕರಿಗೆ ಸಲಹೆ ನೀಡಿದರು.
“ಭಾರತ ಮೊದಲು” ಎಂಬ ದೃಷ್ಟಿಕೋನದೊಂದಿಗೆ ಜಾಗತಿಕ ಕಲ್ಯಾಣಕ್ಕಾಗಿ ಭಾರತವನ್ನು ಪ್ರಬಲ ರಾಷ್ಟ್ರವಾಗಿಸಲು ಯುವಕರು ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ಡಾ. ಭಾಗವತ್ ಒತ್ತಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa