
ತುಮಕೂರು, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್)ದ ವತಿಯಿಂದ ಕೊರಟಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನೂತನವಾಗಿ ನಿರ್ಮಿಸಲಾದ ನಾಲ್ಕು ‘ಹಾಲು ಶೇಖರಣಾ ಘಟಕ’ಗಳಿಗೆ ಸಚಿವ ಜಿ. ಪರಮೇಶ್ವರ ಚಾಲನೆ ನೀಡಿದರು.
ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಜಟ್ಟಿ ಅಗ್ರಹಾರ, ಕಸಬಾ ಹೋಬಳಿಯ ತೀತಾ ಗ್ರಾಮ ಹಾಗೂ ಕೋಳಾಲ ಹೋಬಳಿಯ ಭೈರಗೊಂಡ್ಲು ಮತ್ತು ಪುಟ್ಟಸಂದ್ರ ಗ್ರಾಮಗಳಲ್ಲಿ ನಿರ್ಮಿತ ಈ ಘಟಕಗಳನ್ನು ರೈತಪರ ಯೋಜನೆಯ ಭಾಗವಾಗಿ ಆರಂಭಿಸಲಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಂಚಟಿಗ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ. ಹನುಮಂತನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದರು. ಕಾರ್ಯಕ್ರಮದಲ್ಲಿ ತುಮುಲ್ ಅಧ್ಯಕ್ಷ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಭು, ತುಮುಲ್ ನಿರ್ದೇಶಕ ಶ್ರೀನಿವಾಸ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ನೂತನ ಹಾಲು ಶೇಖರಣಾ ಘಟಕಗಳ ಸ್ಥಾಪನೆಯಿಂದ ಹಾಲು ಉತ್ಪಾದಕರಿಗೆ ತಕ್ಷಣದ ಸಂಗ್ರಹ ವ್ಯವಸ್ಥೆ ಸಿಗುವುದರ ಜೊತೆಗೆ, ಹಾಲಿನ ಗುಣಮಟ್ಟ ಕಾಪಾಡುವಲ್ಲಿ ಹಾಗೂ ರೈತರ ಆದಾಯ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa