
ಗದಗ, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಯನ್ನು ಆಗ್ರಹಿಸಿ ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘ ಸಿಐಟಿಯು ಸಂಯೋಜಿತ ಗಜೇಂದ್ರಗಡ ತಾಲೂಕು ಸಮಿತಿಯ ವತಿಯಿಂದ ಗಜೇಂದ್ರಗಡ ನಗರದಲ್ಲಿ ಬೃಹತ್ ಮೆರವಣಿಗೆ ಹಾಗೂ ತಾಲೂಕು ಮಟ್ಟದ ಸಮ್ಮೇಳನವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು.
ನಗರದೆಲ್ಲೆಡೆ ನಡೆದ ಮೆರವಣಿಗೆಯಲ್ಲಿ ನೂರಾರು ಬೀದಿಬದಿ ವ್ಯಾಪಾರಸ್ಥರು ಪಾಲ್ಗೊಂಡು ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದರು.
ಸಮ್ಮೇಳನವನ್ನು ಸಂಘದ ಗೌರವಾಧ್ಯಕ್ಷರು ಹಾಗೂ ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷರಾದ ಬಾಲು ರಾಠೋಡ ಉದ್ಘಾಟಿಸಿ ಮಾತನಾಡಿ, ಇಂದು ನಡೆದ ಬೃಹತ್ ಮೆರವಣಿಗೆ ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕುವಲ್ಲಿ ಸಂಘ ಯಶಸ್ವಿಯಾಗಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘವು 2014ರಿಂದಲೇ ಗಜೇಂದ್ರಗಡದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಅನೇಕ ಹೋರಾಟಗಳ ಮೂಲಕ ವ್ಯಾಪಾರಸ್ಥರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದೆ ಎಂದು ಅವರು ಹೇಳಿದರು.
ಯುವ ಮುಖಂಡ ಎಫ್.ಎಫ್. ತೋಟದ ಮಾತನಾಡಿ, ಸಮ್ಮೇಳನವು ಶಿಸ್ತಿನಿಂದ ಹಾಗೂ ಅಚ್ಚುಕಟ್ಟಾಗಿ ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಸಮ್ಮೇಳನಗಳ ಮೂಲಕ ಹೊಸ ಬೇಡಿಕೆಗಳನ್ನು ರೂಪಿಸಿಕೊಂಡು, ಸಂಘಟಿತ ಹೋರಾಟದ ಮೂಲಕ ನ್ಯಾಯ ಪಡೆಯಬೇಕು. ಬೀದಿಬದಿ ವ್ಯಾಪಾರಸ್ಥರ ಬದುಕಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಹೋರಾಟಗಳು ನಿರಂತರವಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ತಾಲೂಕು ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ಗಜೇಂದ್ರಗಡ ನಗರವು ವ್ಯಾಪಾರಸ್ಥರ ಪ್ರಮುಖ ಕೇಂದ್ರವಾಗಿದ್ದು, ವ್ಯಾಪಾರ ದಿನೇ ದಿನೇ ವೃದ್ಧಿಯಾಗುತ್ತಿದೆ. ಆದರೆ ನಗರದಲ್ಲಿ ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಬದುಕು ಇನ್ನೂ ಕಷ್ಟಕರವಾಗಿಯೇ ಉಳಿದಿದೆ. ಸರ್ಕಾರಗಳು ಬೀದಿಬದಿ ವ್ಯಾಪಾರಸ್ಥರಿಗೆ ಕಾನೂನುಬದ್ಧವಾಗಿ ನೀಡಬೇಕಾದ ಸೌಲಭ್ಯಗಳನ್ನು ನೀಡದ ಹಿನ್ನೆಲೆ, ಸಂಘದ ನೇತೃತ್ವದಲ್ಲಿ ಬೀದಿಗೆ ಇಳಿದು ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಘಟಿತ ಹೋರಾಟದ ಮೂಲಕ ಕೆಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ತಾಲೂಕು ಉಪಾಧ್ಯಕ್ಷ ಮಾಂಡ್ರೆ, ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಗಣೇಶ್ ರಾಠೋಡ, ಬೀದಿಬದಿ ವ್ಯಾಪಾರಸ್ಥರ ಸಂಘಟನೆಯ ತಾಲೂಕು ಅಧ್ಯಕ್ಷ ಎಸ್.ಬಿ. ದಿಂಡವಾಡ್ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ನಗರ ಆರ್ಥಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ಅವರ ಬದುಕಿಗೆ ರಕ್ಷಣೆ ಹಾಗೂ ಗೌರವ ನೀಡುವುದು ಸರ್ಕಾರದ ಕರ್ತವ್ಯ ಎಂದು ಒತ್ತಾಯಿಸಿದರು. ಬೀದಿಬದಿ ವ್ಯಾಪಾರಸ್ಥರ ಪುನರ್ವಸತಿ, ಪರವಾನಗಿ, ವ್ಯಾಪಾರಕ್ಕೆ ನಿರ್ದಿಷ್ಟ ವಲಯಗಳ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮವನ್ನು ತಾಲೂಕು ಕಾರ್ಯದರ್ಶಿ ಪೀರು ರಾಠೋಡ ನಿರ್ವಹಿಸಿದರು. ವೇದಿಕೆಯ ಮೇಲೆ ಸಿಐಟಿಯು ಮುಖಂಡರಾದ ಮೈಬು ಹವಾಲ್ದಾರ್, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಅಂದಪ್ಪ ಕುರಿ, ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಚಂದ್ರು ರಾಠೋಡ, ಪಿವಿಸಿ ಸಮಿತಿಯ ಸದಸ್ಯ ಚೌಡಮ್ಮ ಯಲ್ಲು, ರಾಜು ಮಾಂಡ್ರೆ, ಮಂಜುಳಾ ಪಮ್ಮಾರ, ಚಂದ್ರಶೇಖರ ರಾಠೋಡ, ಅಂಬರೀಶ್ ಚವ್ಹಾಣ, ಕಳಕಪ್ಪ ಮಾಳೋತ್ತರ, ಕೆ.ಸಿ. ಗೋಡೇಕಾರ, ಉಮೇಶ ನಾವಡೆ, ಸುನೀಲ್ ಕುಂಬಾರ, ಮುತ್ತಣ್ಣ ರಾಠೋಡ, ಅನ್ವರಬಾಸ್ ಹಿರೇಕೊಪ್ಪ, ಮೈಬುಬ ಮಾಲ್ದಾರ, ವಿಷ್ಣು ಚಂದುಕರ, ಗಂಗಾಧರ್ ಸತ್ಯಣ್ಣವರ, ಸಬೀನಾ ಮುಧೋಳ, ದೇವಕ್ಕ ರಾಠೋಡ, ರೇಣವ್ವ ರಾಠೋಡ ಸೇರಿದಂತೆ ಅನೇಕ ಮುಖಂಡರು ಹಾಗೂ ಬೀದಿಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.
ಬೃಹತ್ ಮೆರವಣಿಗೆ ಹಾಗೂ ತಾಲೂಕು ಸಮ್ಮೇಳನದ ಮೂಲಕ ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳ ಬಗ್ಗೆ ಮತ್ತೊಮ್ಮೆ ಧ್ವನಿ ಎತ್ತಲಾಗಿದ್ದು, ಸರ್ಕಾರ ಹಾಗೂ ಸ್ಥಳೀಯ ಆಡಳಿತ ಈ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / lalita MP