
ಕೊಪ್ಪಳ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ರಾಜ್ಯಾದ್ಯಂತ 2026ರ ಜನವರಿ 2 ರಿಂದ 90 ದಿನಗಳ ಕಾಲ ರಾಷ್ಟಕ್ಕಾಗಿ ಮಧ್ಯಸ್ಥಿಕೆ 2.0 ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಅಭಿಯಾನದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಿಕೊಳ್ಳಬಹದಾಗಿದೆ. ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ.
ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬ0ಧಿಸಿದ ಕ್ಲೇಮುಗಳು, ಭೂ ಸ್ವಾಧೀನ ಪ್ರಕರಣಗಳು, ಚೆಕು ಅಮಾನ್ಯದ ಪ್ರಕರಣಗಳು, ರಾಜಿಯಾಗಬಲ್ಲ ಸಿವಿಲ್ ಮತ್ತು ಇತರೆ ಪ್ರಕರಣಗಳು, ವೈವಾಹಿಕ, ಕುಟುಂಬ ನ್ಯಾಯಾಲಯದ ಪ್ರಕರಣಗಳು ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡಲಾಗುತ್ತದೆ.
ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯ ಉಳಿದು ವಿವಾದವು ಬಗೆಹರಿಯುತ್ತದೆ. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹ0ದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇದೊಂದು ವಿಶೇಷ ಅವಕಾಶವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ, ಟೋಲ್ ಸಂಖ್ಯೆ 15100 ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ನೇರವಾಗಿ ಸಂಪರ್ಕಿಸಬಹ0ದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮಹಾಂತೇಶ ದರಗದ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್