

ಕೊಪ್ಪಳ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸಿರುವ 57ನೆ ದಿನದ ಬಲ್ಡೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ಇಂಡಿಯಾ, ವನ್ಯಾ, ಹರೇಕೃಷ್ಣ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಬಳಸಲು ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ, ತುಂಗಭದ್ರಾ ನೀರು ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಲು ಒತ್ತಾಯಿಸಿ, ಮುಖ್ಯಮಂತ್ರಿಗಳು, ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಮಂತ್ರಿ ಶಿವರಾಜ್ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕಾರ್ಖಾನೆ ಬಾಧಿತ ಹಳ್ಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ಜನರ ಅಹವಾಲು ಆಲಿಸಬೇಕೆಂದು ಅನಿರ್ಧಿಷ್ಟ ಧರಣಿ ನಡೆಸಿ ಒತ್ತಾಯಿಸಿದರು.
57ನೇ ದಿನದ ಧರಣಿಯಲ್ಲಿ ಪರಿಸರ ಕವಿ ಗಂಗಾಧರ ಖಾನಾಪೂರ ತಮ್ಮ ಪರಿಸರ ಕಾಳಜಿಯ ಕವನ ವಾಚನ ಮಾಡಿ ಮಾತನಾಡಿ ನಮಗೆ ಜೀವ ಕೊಡಲು ಆಧಾರವಾದದ್ದು ಈ ಪರಿಸರ, ಪರಿಸರ ಉಳಿಯದಿದ್ದರೆ ಯಾವ ಜೀವವೂ ಬದುಕುಳಿಯುವುದಿಲ್ಲ. ಇದು ಗೊತ್ತಿದ್ದು ಸರ್ಕಾರ ಮತ್ತು ಕಂಪನಿಗಳು ಧನದಾಹದಿಂದ ಯಾವ ಜೀವದ ಕಾಳಜಿಯನ್ನು ಮಾಡಲಾರವು. ನಮ್ಮ ಮುಂದಿನ ಪೀಳಿಗೆ ಉಳಿಯಬೇಕಾದರೆ ನಮಗೆ ಎಷ್ಟೇ ಕಷ್ಟವಾದರೂ ಹಿಂಜರಿಯುವ ಮಾತೇ ಇಲ್ಲ. ಮುಂದೆ ಸಾಗಿ ಗಂಭೀರ ಹೆಜ್ಜೆ ಇಡೋಣ ಎಂದರು.
ಕವಯಿತ್ರಿ ಪುಷ್ಪಲತಾ ಏಳುಭಾವಿ ಅವರು ತಮ್ಮ ಪರಿಸರ ಕಾಳಜಿಯ, ಭೂಮಿ, ಕೃಷಿ ರಕ್ಷಣೆಯ ಸ್ವರಚಿತ ಕವನ ವಾಚನ ಮಾಡಿದರು.
ಮಹಾದೇವಪ್ಪ ಎಸ್. ಮಾವಿನಮಡು ಇವರು ಪರಿಸರ ಸಂರಕ್ಷಣೆ, ಜಾಗೃತಿ ಹಾಡುಗಳನ್ನು ಕೊಳಲು ವಾದನ ನುಡಿಸಿ ಹಾಡಿದರು. ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಅವರು 'ಕಾರ್ಖಾನೆ ಬಾಧಿತರೆ ಹೋರಾಟ ಮಾಡಿರೋ' ಎನ್ನುವ ಕವನ ರಚಿಸಿ ವಾಚನ ಮಾಡಿದರು.
ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಮಲ್ಲಿಕಾರ್ಜುನ ಬಿ. ಗೋನಾಳ, ಶಂಭುಲಿಂಗಪ್ಪ ಹರಗೇರಿ, ಕೃಷಿ ಬೆಲೆ ಆಯೋಗ ಸದಸ್ಯ ಡಿ.ಎಚ್. ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಈರಯ್ಯ ಸ್ವಾಮಿ, ವೀರೇಶ ಎಂ. ಭಾಗೂರು, ರಮೇಶ ಪಿ.ಬಿ., ಮಖ್ಬುಲ್ ರಾಯಚೂರು, ಖ್ಯಾತ ಗಾಯಕ ಸದಾಶಿವ ಪಾಟೀಲ, ರವಿ ಕಾಂತನವರ, ಬಸವರಾಜ ನರೇಗಲ್, ಭೀಮಪ್ಪ ಯಲಬುರ್ಗಾ, ವೀರೇಶ ಎ.ಎ. ಅನೇಕರು ಪಾಲ್ಗೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್