
ನವದೆಹಲಿ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ರತ್ನ ಮಹಾಮನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ 164ನೇ ಜನ್ಮ ದಿನಾಚರಣೆಯ ಅಂಗವಾಗಿ, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಬಿಜೆಪಿ ಕಾರ್ಯಾಧ್ಯಕ್ಷ ನಬಿನ್ ಸೇರಿದಂತೆ ಅನೇಕ ಗಣ್ಯ ನಾಯಕರು ಅವರಿಗೆ ಗೌರವ ಸಲ್ಲಿಸಿದರು.
ಮಾಳವೀಯರ ಶಿಕ್ಷಣ, ಪತ್ರಿಕೋದ್ಯಮ, ಸಾಮಾಜಿಕ ಸುಧಾರಣೆ ಹಾಗೂ ಸ್ವರಾಜ್ಯ ಆಂದೋಲನಕ್ಕೆ ನೀಡಿದ ಅಮೂಲ್ಯ ಕೊಡುಗೆಗಳು ದೇಶಕ್ಕೆ ಶಾಶ್ವತ ಸ್ಫೂರ್ತಿಯಾಗಿದೆ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ , ಮಹಾಮನ ಮಾಳವೀಯರ ಬೌದ್ಧಿಕ ಪ್ರಜ್ಞೆ, ಸಾಮಾಜಿಕ ಸುಧಾರಣೆಯ ದೃಷ್ಟಿಕೋನ ಮತ್ತು ನೈತಿಕ ನಾಯಕತ್ವವು ನಿಜವಾದ ಪ್ರಗತಿ ಪ್ರಬುದ್ಧ ಮನಸ್ಸು ಮತ್ತು ಕರುಣೆಯ ಹೃದಯದಿಂದ ಆರಂಭವಾಗುತ್ತದೆ ಎಂಬ ಸಂದೇಶ ನೀಡುತ್ತದೆ. ಅವರ ಆದರ್ಶಗಳು ಮುಂದಿನ ಪೀಳಿಗೆಗಳಿಗೆ ದಾರಿದೀಪವಾಗಿವೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, “ಗುಲಾಮಗಿರಿಯ ಸರಪಳಿಗಳನ್ನು ಮುರಿಯುವಲ್ಲಿ ಮಾಳವೀಯರು ಸಾಮಾಜಿಕ ಸುಧಾರಣೆಯ ಮೂಲಕ ರಾಷ್ಟ್ರೀಯ ಚೇತನೆಯನ್ನು ಜಾಗೃತಗೊಳಿಸಿದರು. ಮಾತೃಭೂಮಿಯ ಸೇವೆಗೆ ಸಮರ್ಪಿತರಾಗಿದ್ದ ಅವರ ಶಿಕ್ಷಣ ಕ್ಷೇತ್ರದ ಕೊಡುಗೆ ಅನನ್ಯ” ಎಂದು ಸ್ಮರಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ , “ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಮಾಳವೀಯರು ಭಾರತೀಯ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಆಧುನಿಕ ಶಿಕ್ಷಣವನ್ನು ಸಂಯೋಜಿಸಿದರು. ಪತ್ರಿಕೋದ್ಯಮವನ್ನು ರಾಷ್ಟ್ರ ನಿರ್ಮಾಣದ ಶಕ್ತಿಶಾಲಿ ಮಾಧ್ಯಮವನ್ನಾಗಿ ರೂಪಿಸಿದರು. ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ರೈತರ ಕಲ್ಯಾಣಕ್ಕಾಗಿ ಅವರ ಬದ್ಧತೆ ಅವಿಸ್ಮರಣೀಯ” ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, “ಬಿಎಚ್‌ಯು ಸಂಸ್ಥಾಪಕರಾದ ಮಾಳವೀಯರು ಶಿಕ್ಷಣವನ್ನು ರಾಷ್ಟ್ರದ ಶಕ್ತಿಯನ್ನಾಗಿ ಪರಿವರ್ತಿಸಿದರು. ಅವರ ಕೊಡುಗೆಗಳು ಆಧುನಿಕ ಭಾರತದ ಶೈಕ್ಷಣಿಕ ಅಡಿಪಾಯವಾಗಿದೆ” ಎಂದು ಹೇಳಿದ್ದಾರೆ.
ಪಂಡಿತ್ ಮದನ್ ಮೋಹನ್ ಮಾಳವೀಯರು ಡಿಸೆಂಬರ್ 25, 1861ರಂದು ಪ್ರಯಾಗ್‌ರಾಜ್‌ನಲ್ಲಿ ಜನಿಸಿದ್ದು, ನವೆಂಬರ್ 12, 1946ರಂದು ನಿಧನರಾದರು. ಅವರು 1916ರಲ್ಲಿ ಏಷ್ಯಾದ ಅತಿದೊಡ್ಡ ವಸತಿ ವಿಶ್ವವಿದ್ಯಾಲಯಗಳಲ್ಲೊಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ 1909ರಲ್ಲಿ ಲೀಡರ್, 1910ರಲ್ಲಿ ಮರ್ಯಾದಾ ಮತ್ತು 1924ರಲ್ಲಿ ಹಿಂದೂಸ್ತಾನ್ ಟೈಮ್ಸ್ ಆರಂಭದಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಲ್ಕು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, 2015ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಗೌರವಕ್ಕೆ ಪಾತ್ರರಾದರು. ಅಸ್ಪೃಶ್ಯತೆ ನಿರ್ಮೂಲನೆ, ಮಹಿಳಾ ಶಿಕ್ಷಣ ಮತ್ತು ರೈತರ ಹಕ್ಕುಗಳಿಗಾಗಿ ಅವರ ಹೋರಾಟ ಭಾರತೀಯ ಸಾಮಾಜಿಕ ಪುನರುಜ್ಜೀವನದ ಪ್ರಮುಖ ಅಧ್ಯಾಯಗಳಾಗಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa