
ನವದೆಹಲಿ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಎರಡು ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ ಸಂಸದ್ ಖೇಲ್ ಮಹೋತ್ಸವವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ, ಮಧ್ಯಾಹ್ನ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ರಾಷ್ಟ್ರೀಯ ಪ್ರೇರಣಾ ಸ್ಥಳವನ್ನು ಉದ್ಘಾಟಿಸಲಿದ್ದಾರೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಇಂದು ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ.
ವಾಜಪೇಯಿ ಅವರ ಜೀವನ, ಆದರ್ಶಗಳು ಹಾಗೂ ರಾಷ್ಟ್ರಸೇವೆಯನ್ನು ಗೌರವಿಸುವ ಉದ್ದೇಶದಿಂದ ಲಕ್ನೋದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರೀಯ ಪ್ರೇರಣಾ ಸ್ಥಳವನ್ನು ಮಧ್ಯಾಹ್ನ 2.30ಕ್ಕೆ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸಂದರ್ಭ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವರು.
ರಾಷ್ಟ್ರೀಯ ಪ್ರೇರಣಾ ಸ್ಥಳದ ವೈಶಿಷ್ಟ್ಯಗಳು:
ಈ ಸಂಕೀರ್ಣವು ಡಾ. ಶ್ಯಾಮ ಪ್ರಸಾದ್ ಮುಖರ್ಜಿ, ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 65 ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನು ಒಳಗೊಂಡಿದೆ. ಪ್ರಧಾನಿ ಮೋದಿಯವರ ಕಲ್ಪನೆಯ ಈ ಯೋಜನೆಯನ್ನು ಸ್ವತಂತ್ರ ಭಾರತದ ಶ್ರೇಷ್ಠ ನಾಯಕರ ಪರಂಪರೆಯನ್ನು ಗೌರವಿಸುವ ಉದ್ದೇಶದಿಂದ ರೂಪಿಸಲಾಗಿದೆ.
ಸುಮಾರು ₹230 ಕೋಟಿ ವೆಚ್ಚದಲ್ಲಿ, 65 ಎಕರೆ ವಿಸ್ತೀರ್ಣದ ವಿಶಾಲ ಪ್ರದೇಶದಲ್ಲಿ ಈ ರಾಷ್ಟ್ರೀಯ ಸ್ಮಾರಕವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಶಾಶ್ವತ ರಾಷ್ಟ್ರೀಯ ಮಹತ್ವದ ಆಸ್ತಿಯಾಗಿ ಪರಿಗಣಿಸಲಾಗಿದೆ. ನಾಯಕತ್ವ ಮೌಲ್ಯಗಳು, ರಾಷ್ಟ್ರಸೇವೆ, ಸಾಂಸ್ಕೃತಿಕ ಪ್ರಜ್ಞೆ ಹಾಗೂ ಸಾರ್ವಜನಿಕ ಸ್ಪೂರ್ತಿಯನ್ನು ಉತ್ತೇಜಿಸುವ ಗುರಿಯೊಂದಿಗೆ ಈ ಸಂಕೀರ್ಣವನ್ನು ರೂಪಿಸಲಾಗಿದೆ.
ಈ ಸಂಕೀರ್ಣದಲ್ಲಿ ಅತ್ಯಾಧುನಿಕ ವಸ್ತುಸಂಗ್ರಹಾಲಯವೂ ಸೇರಿದ್ದು, ಕಮಲ ಹೂವಿನ ಆಕಾರದಲ್ಲಿ ವಿನ್ಯಾಸಗೊಳಿಸಲಾದ ಈ ಮ್ಯೂಸಿಯಂ ಸುಮಾರು 98,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಡಿಜಿಟಲ್ ಹಾಗೂ ತಲ್ಲೀನಗೊಳಿಸುವ ತಂತ್ರಜ್ಞಾನಗಳ ಮೂಲಕ ಭಾರತದ ರಾಷ್ಟ್ರೀಯ ಪ್ರಯಾಣ ಮತ್ತು ಈ ದಾರ್ಶನಿಕ ನಾಯಕರ ಕೊಡುಗೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
ರಾಷ್ಟ್ರೀಯ ಪ್ರೇರಣಾ ಸ್ಥಳದ ಉದ್ಘಾಟನೆ ನಿಸ್ವಾರ್ಥ ನಾಯಕತ್ವ ಮತ್ತು ಉತ್ತಮ ಆಡಳಿತದ ಆದರ್ಶಗಳನ್ನು ಸಂರಕ್ಷಿಸಿ ಮುಂದುವರಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಇದು ಪ್ರಸ್ತುತ ಹಾಗೂ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ಕೇಂದ್ರವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa