

ಬಳ್ಳಾರಿ, 23 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಹಲವೆಡೆ ಮಕ್ಕಳು ಕಾಣೆಯಾದ ಪ್ರಕರಣಗಳು ದಾಖಲಾಗಿದ್ದು, ಹಲವು ಪ್ರಕರಣಗಳಲ್ಲಿ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಾಣೆಯಾದ ಮಕ್ಕಳ ಪತ್ತೆಗೆ ವಿಶೇಷ ಕಾರ್ಯಪಡೆಯು ಚುರುಕುಗೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದ್ದಾರೆ.
ಮಂಗಳವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮಕ್ಕಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರು, ಪ್ಯಾರಾಲೀಗಲ್ ವಾಲಂಟಿರ್ಸ್ ಗಳೊಂದಿಗೆ ಏರ್ಪಡಿಸಿದ್ದ ‘ಕಾಣೆಯಾದ ಮಕ್ಕಳ ಪತ್ತೆಗೆ ವಿಶೇಷ ಕಾರ್ಯಪಡೆ ಸಮಿತಿಯ ತ್ರೈಮಾಸಿಕ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಪಹರಣ, ಕಾಣೆಯಾದ ಮಕ್ಕಳ ಬಗ್ಗೆ ವಿವಿಧ ಇಲಾಖೆಗಳೊಂದಿಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳ ಮಾಹಿತಿಯನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಪ್ರತಿ ಮಾಹೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಪಡೆ ರಚಿಸಲಾಗಿದೆ. ಕಾಣೆಯಾದ, ಪತ್ತೆಯಾಗದ ಮಕ್ಕಳ ಪಟ್ಟಿ ಸಿದ್ಧಪಡಿಸಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ವರದಿ ನೀಡಬೇಕು ಎಂದರು.
ಹಲವಾರು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಪ್ರಕರಣಗಳನ್ನು ಪರಿಹರಿಸಲು ವಿವಿಧ ಇಲಾಖೆಗಳೊಂದಿಗೆ ಸಮನ್ವಯದೊಂದಿಗೆ, ಜಿಲ್ಲಾ ಮಟ್ಟದ ವಿಶೇಷ ಅಭಿಯಾನಗಳನ್ನು ಪ್ರಾರಂಭಿಸಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕಾಣೆಯಾದ ಮಕ್ಕಳ ಮನೆ ಭೇಟಿ ನೀಡಿ ಪ್ರಸ್ತುತ ವಸ್ತುಸ್ಥಿತಿಗಳ ಕುರಿತು ಮಾಹಿತಿ ಪಡೆಯಬೇಕು. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಾವಲು ಸಭೆ ಹಮ್ಮಿಕೊಂಡು ಆ ಸಭೆಯಲ್ಲಿ ಕಾಣೆಯಾದ ಮಕ್ಕಳ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ ರವಿಕುಮಾರ್ ಅವರು ಮಾತನಾಡಿ, ಎಲ್ಲಾ ಠಾಣೆಯ ಪೆÇಲೀಸ್ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿ ಕಾಣೆಯಾದ ಮಕ್ಕಳ ಕುರಿತು ಪತ್ತೆ ಹಚ್ಚಲು ಕ್ರಮವಹಿಸಬೇಕು. ಪೆÇೀಕ್ಸೋ ಘಟನೆ ಕಂಡುಬಂದಲ್ಲಿ ಯಾವುದೇ ವಿಳಂಬ ಇಲ್ಲದೇ ಕೂಡಲೇ ಎಫ್‍ಐಆರ್ ದಾಖಲಿಸಲು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಪೊಲೀಸ್ ಇಲಾಖೆ ವತಿಯಿಂದ ತೆರೆದ ಮನೆ ಕಾರ್ಯಕ್ರಮವನ್ನು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಮಕ್ಕಳು ಕಾಣೆಯಾದ ಸಂದರ್ಭದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಅಥವಾ 112 ಕರೆ ಮಾಡಬೇಕು ಎಂದು ತಿಳಿಸಿದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಎಲ್ಲಾ ನಾಪತ್ತೆ ಪ್ರಕರಣಗಳನ್ನು ಅಪಹರಣ ಪ್ರಕರಣಗಳಾಗಿ ದಾಖಲಿಸಲಾಗುತ್ತದೆ ಮತ್ತು 18 ಮೇಲ್ಪಟ್ಟ ವಯಸ್ಸಿನ ನಾಪತ್ತೆ ಪ್ರಕರಣಗಳನ್ನು ಕಾಣೆಯಾಗಿರುವುದು ಎಂದು ಪರಿಗಣಿಸಲಾಗುತ್ತದೆ ಎಂದು ಮಹಿಳಾ ಪೊಲೀಸ್ ಠಾಣೆಯ ಸಿಪಿಐ ರಮೇಶ್ ಕುಲಕರ್ಣಿ ಅವರು ಸಭೆಗೆ ತಿಳಿಸಿದರು.
ಇದೇ ವೇಳೆ ಬಾಲ್ಯವಿವಾಹ ನಿ ಷೇಧ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಈಶ್ವರ್ ರಾವ್, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಕೃಷ್ಣಪ್ಪ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಗೌಸಿಯಾ, ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳಾದ ರೇಷ್ಮಾ, ಮಾರುತಿ, ರೀಡ್ಸ್ ಸಂಸ್ಥೆಯ ತಿಪ್ಪೇಸ್ವಾಮಿ, ರೀಚ್ ಸಂಸ್ಥೆಯ ಹನುಮಂತಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹೊನ್ನುರಪ್ಪ, ಮೋಹನ್ ರೆಡ್ಡಿ, ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್