
ಗದಗ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಶಾಲಾ ಮಕ್ಕಳ ಸಾರಿಗೆ ಸುರಕ್ಷತೆಯೇ ಶಿಕ್ಷಣ ಸಂಸ್ಥೆಗಳ ಪ್ರಥಮಾದ್ಯತೆಯಾಗಿರಲಿ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಸ್ಪಷ್ಟಪಡಿಸಿದರು.
ಗದಗ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮುಖ್ಯಸ್ಥರೊಂದಿಗೆ ನಡೆದ ಮಕ್ಕಳ ಸುರಕ್ಷತೆ ಕುರಿತ ಸಭೆಯಲ್ಲಿ, ವಿಶೇಷವಾಗಿ ಶಾಲಾ ಮಕ್ಕಳ ಸುರಕ್ಷಿತ ಸಾರಿಗೆ ವ್ಯವಸ್ಥೆ ಕುರಿತು ವಿಸ್ತೃತ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು, ಶಾಲಾ ವಾಹನಗಳು ಸರ್ಕಾರದ ನಿಯಮಾವಳಿಗಳಂತೆ ಸಂಪೂರ್ಣವಾಗಿ ಸುರಕ್ಷಿತವಾಗಿರಬೇಕು ಎಂದು ಸೂಚಿಸಿದರು. ಪ್ರತಿಯೊಂದು ಶಾಲಾ ಬಸ್‌ಗಳಲ್ಲಿ ಅಗತ್ಯ ದಾಖಲೆಗಳು, ವಾಹನದ ತಾಂತ್ರಿಕ ಸ್ಥಿತಿ, ನಿಯಮಿತ ಫಿಟ್ನೆಸ್ ಪ್ರಮಾಣಪತ್ರ, ವೇಗ ನಿಯಂತ್ರಕ ಸಾಧನ, ಅಗ್ನಿಶಾಮಕ ಉಪಕರಣಗಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ತುರ್ತು ನಿರ್ಗಮನ ವ್ಯವಸ್ಥೆ ಕಡ್ಡಾಯವಾಗಿರಬೇಕು ಎಂದು ಆದೇಶಿಸಿದರು.
ಶಾಲಾ ವಾಹನ ಚಾಲಕರಿಗೆ ಸೂಕ್ತ ಚಾಲನಾ ಪರವಾನಗಿ, ಅನುಭವ ಹಾಗೂ ಮಕ್ಕಳೊಂದಿಗೆ ಸ್ನೇಹಪರ ವರ್ತನೆ ಅಗತ್ಯವಿದೆ ಎಂದು ತಿಳಿಸಿದರು. ಶಾಲಾ ಬಸ್‌ಗಳಲ್ಲಿ ನಿರೀಕ್ಷಕ (ಅಟೆಂಡರ್) ನೇಮಕ ಕಡ್ಡಾಯವಾಗಿದ್ದು, ಮಕ್ಕಳ ಏರುವ-ಇಳಿಯುವ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ಯಾವುದೇ ರೀತಿಯ ಅತಿವೇಗ, ಮದ್ಯಪಾನ ಚಾಲನೆ ಅಥವಾ ನಿರ್ಲಕ್ಷö್ಯಕ್ಕೆ ಆಸ್ಪದವಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಪುನರುಚ್ಚರಿಸಿದರು.
ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ರೋಹನ್ ಜಗದೀಶ್ ಮಾತನಾಡಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ವಾಹನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಜಿಪಿಎಸ್ ವ್ಯವಸ್ಥೆ ಹಾಗೂ ಪೋಷಕರಿಗೆ ಮಾಹಿತಿ ನೀಡುವ ತಂತ್ರಜ್ಞಾನ ಬಳಕೆಗೆ ಒತ್ತು ನೀಡಬೇಕು ಎಂದರು. ಶಾಲಾ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಲೋಪ ಕಂಡುಬ0ದಲ್ಲಿ ಸಂಬ0ಧಪಟ್ಟ ಶಾಲಾ ಆಡಳಿತದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಟೋಗಳ ಮೂಲಕ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಸಂದರ್ಭದಲ್ಲಿ ಅಟೋ ಚಾಲಕರು ನಿಗದಿತ ಸಂಖ್ಯೆಗಿಂತ ಅಧಿಕ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಸುರಕ್ಷತೆಗೆ ಕ್ರಮ ವಹಿಸಿ ನಿಧಾನವಾಗಿ ಮಕ್ಕಳನ್ನು ಶಾಲೆಗಳಿಗೆ ತಲುಪಿಸುವ ಹಾಗೂ ಮನೆಗೆ ಕರೆದೊಯ್ಯುವ ಜವಾಬ್ದಾರಿ ವಾಹನ ಚಾಲಕರದ್ದಾಗಿರುತ್ತದೆ ಎಂದು ರೋಹನ್ ಜಗದೀಶ್ ತಿಳಿಸಿದರು.
ಕನಕದಾಸ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ರವಿ ದಂಡಿನ ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿನ ಶಾಲಾ ವಾಹನಗಳ ಸಂಪೂರ್ಣ ಸುರಕ್ಷತೆಗೆ ಪ್ರಥಮಾದ್ಯತೆ ನೀಡಬೇಕಿದೆ. ಪ್ರತಿ ಮಗುವಿನ ಜೀವವೂ ಅತ್ಯಮೂಲ್ಯ. ನಿರ್ಲಕ್ಷ್ಯ ವಾಹನ ಚಲಾವಣೆ ಹಾಗೂ ವರ್ತನೆ ಸಹಿಸಲಾಗದು. ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ನಮ್ಮ ಸಂಸ್ಥೆಯಲ್ಲಿನ ಮಕ್ಕಳ ಆರೋಗ್ಯ ಹಾಗೂ ಸೂಕ್ತ ಸಾರಿಗೆ ಸುರಕ್ಷತೆಗೆ ಆದ್ಯತೆ ವಹಿಸುವ ಮೂಲಕ ನಾಡಿನ ಮುಂದಿನ ಪ್ರಜೆಗಳ ಭವಿಷ್ಯ ಉಜ್ವಲಗೊಳಿಸಲು ಶ್ರಮಿಸೋಣ.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಅವರುಗಳು ಮಕ್ಕಳ ಸುರಕ್ಷಿತ ಸಾರಿಗೆ ಕುರಿತು ಶಾಲಾ ಸಂಸ್ಥೆಯ ಮುಖ್ಯಸ್ಥರು ವಹಿಸಬೇಕಾದ ಕ್ರಮಗಳ ಕುರಿತು ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಸಭೆಯಲ್ಲಿ ಪ್ರೊ.ಕೆ.ಎಚ್. ಬೇಲೂರ, ಶಿಕ್ಷಣ ಇಲಾಖೆ, ಸಾರಿಗೆ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP