
ಕೋಲಾರ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದ ಎಲ್ಲಾ ಕಡೆ ಸುಮಾರು 2000 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೇ ವಿದ್ಯುದ್ದೀಕರಣ ಆಧುನೀಕರಿಸಲಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.
ಕೋಲಾರ ಜಿಲ್ಲೆಯ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಲೆವೆಲ್ ಕ್ರಾಸಿಂಗ್ ಬದಲಿಗೆ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆಯ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು, ರಾಜ್ಯಕ್ಕೆ ಕೋಲಾರ, ಬೆಂಗಳೂರು, ರಾಮನಗರ ಹಾಗೂ ತುಮಕೂರು ಹೃದಯಭಾಗ ಇದ್ದಹಾಗೆ. ಈ ಭಾಗದ ಅಭಿವೃದ್ದಿ ಮಾಡುವುದು ನಮ್ಮ ಚಿಂತನೆಯಾಗಿದೆ ಎಂದರು.
ರೈಲ್ವೇ ಡಿಆರ್ ಎಂ ಒ ಅವರೊಂದಿಗೆ ಚರ್ಚಿಸಿ ಅಗತ್ಯವಿರುವ ಕಡೆ ಮೆಲ್ಸೇತುವೆ ಮತ್ತು ಕೆಳಸೇತುವೆಗಳನ್ನು ಆದ್ಯತೆ ಮೇರೆಗೆ ಕೆಲಸ ಮಾಡಲಾಗುತ್ತಿದೆ. 25 ರಿಂದ 30ವರ್ಷದ ಹಳೆಯದಾದ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳನ್ನು 2026- 27 ರ ಒಳಗೆ ಪೂರ್ಣಗೊಳಿಸಲಾಗುವುದು ಎಂದರು.
ಕೋಲಾರದಿಂದ ಬೆಂಗಳೂರಿಗೆ ನೇರ ರೈಲ್ವೇ ಮಾಡಲು ಸ್ಥಲ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆ ರೈಲ್ವೇ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.
ಟೇಕಲ್ ರೈಲು ನಿಲ್ದಾಣದ ಹತ್ತಿರದ ಲೆವೆಲ್ ಕ್ರಾಸಿಂಗ್ ಗೇಟ್ ಹೆಚ್ಚು ವಾಹನ ದಟ್ಟಣೆಯಿಂದ ಕೂಡಿದ ಲೆವೆಲ್ ಕ್ರಾಸಿಂಗ್ ಗೇಟ್ ಆಗಿದ್ದು ಮಾರ್ಚ್ 2024ರ ಗಣತಿಯಂತೆ ಇದರ ರೈಲು ವಾಹನ ಏಕಮಾನವು 10,03,704 ಆಗಿತ್ತು. ಹೆಚ್ಚುತ್ತಿರುವ ವಾಹನ ದಟ್ಟಣೆಯ ಸಮಸ್ಯೆಯನ್ನು ಪರಿಹರಿಸಲು ಮತ್ತು ಸಂಚಾರದ ಸುರಕ್ಷತೆಯನ್ನು ಹೆಚ್ಚಿಸಲು ಇಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ ಗೆ ಬದಲಾಗಿ ರಸ್ತೆ ಮೇಲ್ಸೇತುವೆ ನಿರ್ಮಿಸಲಾಗಿದೆ ಎಂದರು.
ಈ ರಸ್ತೆ ಮೇಲ್ಸೇತುವೆಯನ್ನು ರೈಲ್ವೆ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳ 50:50 ವೆಚ್ಚಹಂಚಿಕೆಯ ಆಧಾರದಲ್ಲಿ 23.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ರಸ್ತೆ ಮೇಲ್ಸೇತುವೆ ರೈಲ್ವೆ ಸ್ಕ್ಯಾನ್ 36 ಮೀ. ಬೋ ಸ್ಪಿಂಗ್ ಗರ್ಡರ್ ನಿಂದ ಕೂಡಿದೆ. ಮಾಲೂರು ಕಡೆಗೆ 140.28 ಮೀ. ಉದ್ದದ ಅಪ್ರೋಚ್ ರೋಡ್ ಇದ್ದು ಬಂಗಾರಪೇಟೆಯ ಕಡೆಗೆ 154.7 ಮೀ. ಉದ್ದದ ಅಪ್ರೋಚ್ ಇದೆ.
ಈ ರಸ್ತೆ ಮೇಲ್ಸೇತುವೆ ನಿರ್ಮಾಣದಿಂದ ಸುಗಮ ಮತ್ತು ತಡೆರಹಿತ ರಸ್ತೆ ಸಂಚಾರಕ್ಕೆ ಅನುಕೂಲವಾಗುತ್ತದೆ. ರಸ್ತೆ ಮತ್ತು ರೈಲು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಹಾಗೂ ಈ ಭಾಗದಲ್ಲಿ ಸಾರಿಗೆಯ ದಕ್ಷತೆಯನ್ನು ಸುಧಾರಿಸುತ್ತದೆ.
ಈ ರಸ್ತೆ ಮೇಲ್ಸೇತುವೆ ದಾಸರಹಳ್ಳಿ ಮತ್ತು ಕೆ.ಜಿ. ಹಳ್ಳಿ, ನಡುವೆ ಸಂಪರ್ಕವನ್ನು ಒದಗಿಸುತ್ತದೆ. ಈ ರಸ್ತೆ ಮೇಲ್ಸೇತುವೆ ತಡೆರಹಿತ ವಾಹನ ಸಂಚಾರವನ್ನು ಸಾಧ್ಯವಾಗಿಸುತ್ತದೆ ಮತ್ತು ಗೇಟ್ ಅನ್ನು ಹಾಕಿದಾಗ ರಸ್ತೆ ಬಳಕೆದಾರರಿಗೆ ಉಂಟಾಗುತ್ತಿದ್ದ ವಿಳಂಬವನ್ನು ತಪ್ಪಿಸುತ್ತದೆ ಎಂದರು.
ನಂತರ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ನವೀಕರಿಸಲಾದ ಉರಗಾಂ ರೈಲ್ವೆ ನಿಲ್ದಾಣ ಹಾಗೂ ನವೀಕರಿಸಲಾದ ಕೋರಮಂಡಲ ರೈಲ್ವೆ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಶಾಸಕರಾದ ರೂಪಕಲಾ ಶಶಿಧರ್, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ