ಗದಗ ಜಿಲ್ಲೆಯಲ್ಲಿ ಎಳ್ಳ ಅಮವಾಸ್ಯೆ ಸಂಭ್ರಮ
ಗದಗ, 19 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಉತ್ತರ ಕರ್ನಾಟಕದ ರೈತರಿಗೆ ಎಳ್ಳ ಅಮವಾಸ್ಯೆ ಬಂದರೆ ಖುಷಿಯ ಹಬ್ಬವೇ ಸರಿ. ರೈತರ ಹಬ್ಬವೆಂದೇ ಖ್ಯಾತಿ ಪಡೆದಿರುವ ಎಳ್ಳ ಅಮವಾಸ್ಯೆ ಇಂದು ಉತ್ತರ ಕರ್ನಾಟಕದ ಹಳ್ಳಿ–ಹಳ್ಳಿಗಳಲ್ಲಿ ಭಾರಿ ಸಡಗರ, ಸಂಭ್ರಮದೊಂದಿಗೆ ಆಚರಿಸಲಾಯಿತು. ಗದಗ ಜಿಲ್ಲೆಯ ರೋಣ, ನರಗುಂದ, ಶಿ
ಫೋಟೋ


ಗದಗ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಉತ್ತರ ಕರ್ನಾಟಕದ ರೈತರಿಗೆ ಎಳ್ಳ ಅಮವಾಸ್ಯೆ ಬಂದರೆ ಖುಷಿಯ ಹಬ್ಬವೇ ಸರಿ. ರೈತರ ಹಬ್ಬವೆಂದೇ ಖ್ಯಾತಿ ಪಡೆದಿರುವ ಎಳ್ಳ ಅಮವಾಸ್ಯೆ ಇಂದು ಉತ್ತರ ಕರ್ನಾಟಕದ ಹಳ್ಳಿ–ಹಳ್ಳಿಗಳಲ್ಲಿ ಭಾರಿ ಸಡಗರ, ಸಂಭ್ರಮದೊಂದಿಗೆ ಆಚರಿಸಲಾಯಿತು. ಗದಗ ಜಿಲ್ಲೆಯ ರೋಣ, ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಢ ಹಾಗೂ ಗದಗ ತಾಲೂಕುಗಳಲ್ಲಿ ರೈತರು ಜಮೀನುಗಳಿಗೆ ತೆರಳಿ ಭೂಮಿತಾಯಿಗೆ ಪೂಜೆ ಸಲ್ಲಿಸಿ ಹಬ್ಬವನ್ನು ಆಚರಿಸಿದರು.

ಬೆಳೆದು ನಿಂತ ಹಸಿರು ಹೊಲಗಳಲ್ಲಿ ಭೂಮಿತಾಯಿಗೆ ವಿಶೇಷ ಪೂಜೆ ನೆರವೇರಿಸಿ, ರೈತ ಮಹಿಳೆಯರು ಚರಗ ಚೆಲ್ಲುವ ಮೂಲಕ ಮಳೆ–ಬೆಳೆ ಸಮೃದ್ಧಿಯಾಗಲಿ ಎಂದು ಭಕ್ತಿಯಿಂದ ಪ್ರಾರ್ಥಿಸಿದರು. ಮರಕ್ಕೆ ಉಡಿತುಂಬಿ, ಕೈಗೆ ಕಂಕಣಕಟ್ಟಿ, ಐದು ಕಲ್ಲುಗಳನ್ನು ಇಟ್ಟು ಪಂಚಪಾಂಡವರೆಂದು ಪೂಜೆ ಮಾಡುವ ಸಂಪ್ರದಾಯವೂ ಕಂಡುಬಂತು. ಪೂಜೆ ಬಳಿಕ ನೈವೆದ್ಯ ಸಲ್ಲಿಸಿ, ಹುಲ್ಲಲಿಗೂ–ಚಳಾಂಬ್ರಿಗೋ ಎಂದು ಸಿಹಿತಿನಿಸುಗಳನ್ನು ಹೊಲದ ಸುತ್ತ ಎರಚಿ ಉತ್ತಮ ಫಲವತ್ತತೆಗಾಗಿ ಬೇಡಿಕೊಂಡರು.

ಇನ್ನೂ ಎಳ್ಳ ಅಮವಾಸ್ಯೆ ಹಬ್ಬದ ಅಂಗವಾಗಿ ಉತ್ತರ ಕರ್ನಾಟಕದ ಜವಾರಿ ಅಡುಗೆಯ ಘಮಘಮ ವಾಸನೆ ಜಮೀನುಗಳಲ್ಲಿ ತುಂಬಿತ್ತು. ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಎಳ್ಳು ಹೋಳಿಗೆ, ಸೇಂಗಾ ಹೋಳಿಗೆ, ಕರಿಗಡಬು, ಕರ್ಚಿಕಾಯಿ, ಬಜ್ಜಿ ಹಾಗೂ ವಿವಿಧ ಬಗೆಯ ಚಟ್ನಿಗಳೊಂದಿಗೆ ಸಾಮೂಹಿಕ ಭಕ್ಷ್ಯ ಭೋಜನ ನಡೆಸಿ ರೈತರು ಸಂಭ್ರಮಿಸಿದರು. ದೂರದ ಊರಿನ ಸಂಬಂಧಿಕರು, ಗೆಳೆಯರನ್ನು ಜಮೀನಿಗೆ ಕರೆಸಿ ಒಟ್ಟಿಗೆ ಪೂಜೆ ಮಾಡಿ, ಒಟ್ಟಿಗೆ ಊಟ ಮಾಡುವ ಸಂಭ್ರಮ ವಿಶೇಷವಾಗಿ ಕಾಣಿಸಿಕೊಂಡಿತು.

ಶತಮಾನಗಳ ಇತಿಹಾಸ ಹೊಂದಿರುವ ಎಳ್ಳ ಅಮವಾಸ್ಯೆ ಹಬ್ಬದಲ್ಲಿ ಭೂತಾಯಿಗೆ ಸೀಮಂತ ಕಾರ್ಯ ನೆರವೇರಿಸಿ ಪೂಜೆ ಸಲ್ಲಿಸುವ ಮೂಲಕ ಹಿಂಗಾರು ಬೆಳೆಗಳಾದ ಗೋಧಿ, ಕಡಲೆ, ಕುಸುಬೆ ಉತ್ತಮವಾಗಿ ಬೆಳೆಯಲೆಂದು ರೈತರು ಪ್ರಾರ್ಥಿಸಿದರು. ವರ್ಷಾನುಗಟ್ಟಲೆ ಸಮಸ್ಯೆಗಳ ನಡುವೆ ಬದುಕುತ್ತಿರುವ ರೈತರು, ಈ ದಿನದಂದು ಎಲ್ಲ ಸಂಕಷ್ಟಗಳನ್ನು ಮರೆತು ಭೂತಾಯಿಗೆ ನಮಿಸಿ ಸಂತಸದ ಕ್ಷಣಗಳನ್ನು ಅನುಭವಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande