
ಕೋಲಾರ, ಡಿಸೆಂಬರ್ ೧೯ (ಹಿ.ಸ) :
ಆ್ಯಂಕರ್ : ಕೇಂದ್ರದ ಬಿಜೆಪಿ ಸರ್ಕಾರವು ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ವಿಬಿ ಜೀ ರಾಮ್ ಜೀ ಎಂದು ರಾಜಕೀಯ ಕಾರಣಕ್ಕಾಗಿ ಬದಲಾವಣೆ ಮಾಡಿದೆ. ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬಿಬಿ ಜೀ ರಾಮ್ ಜೀ ಎಂದು ತಿದ್ದುಪಡಿ ಮಾಡುವ ಮೂಲಕ ಯೋಜನೆಯನ್ನು ಕೇಸರೀಕರಣ ಮಾಡಿದೆ. ಕೇಂದ್ರ ಸರ್ಕಾರದ ಈ ನಡೆ ಮಹಾತ್ಮಾ ಗಾಂಧಿಗೆ ತೋರಿದ ಅಗೌರವಾಗಿದೆ ಎಂದು ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಕಾಂಗ್ರೆಸ್ ಜಾರಿ ಮಾಡಿದ ಯೋಜನೆಗಳನ್ನು ರದ್ದು ಮಾಡಲು ಹೊರಟಿದೆ. ಮನರೇಗಾ ಹೆಸರು ಬದಲಾವಣೆ ಮಾಡುವ ಮೂಲಕ ರಾಜಕೀಯ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ಅದರಲ್ಲೂ ವಿಶೇಷವಾಗಿ ಬಡವರಿಗೆ ಅನುಕೂಲವಾಗಿದ್ದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಕೇವಲ ಹೆಸರು ಮಾತ್ರ ಬದಲಾವಣೆ ಮಾಡಿದೆ ಇದರಿಂದಾಗಿ ಬಡವರ ಹೊಟ್ಟೆ ತುಂಬುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರದಲ್ಲಿ ಹಲವಾರು ವರ್ಷಗಳ ಕಾಲ ಆಡಳಿತ ನಡೆಸಿದ್ದರೂ ಯಾವುದೇ ಯೋಜನೆಗಳ ಹೆಸರು ಬದಲು ಮಾಡಿರಲಿಲ್ಲ. ಜನಪರ ಕೆಲಸ ಮಾಡಬೇಕಾದ ಬಿಜೆಪಿಯ ಕೇಂದ್ರ ಸರ್ಕಾರವು ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಶಾಶ್ವತವಲ್ಲ. ಆರ್.ಎಸ್.ಎಸ್. ಕಾರ್ಯಸೂಚಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ ಮಹಾತ್ಮಾ ಗಾಂಧಿ ವಿರುದ್ಧದ ಸಿದ್ಧಾಂತಕ್ಕೆ ಒತ್ತುಕೊಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಹಾಗೂ ಅವರ ಪೋಷಕ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೊದಲಿನಿಂದಲೂ ಮಹಾತ್ಮ ಗಾಂಧಿ ಅವರನ್ನು ವಿರೋಧಿಸುತ್ತ ಬಂದಿವೆ. ಯೋಜನೆಗೆ ಮಹಾತ್ಮಾ ಗಾಂಧಿ ಅವರ ಹೆಸರು ಇಟ್ಟಿರುವುದನ್ನು ಸಹ ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿಗೆ ಗಾಂಧಿ ಹಾಗೂ ನೆಹರು ಬಗ್ಗೆ ದ್ವೇಷದ ಜೊತೆಗೆ ಹೊಡೆದು ಆಳುವ ನೀತಿ ಅನುಸರಿಸಿಕೊಂಡು ಬಂದಿದೆ ಇಂತಹ ಕೀಳು ಮಟ್ಟದ ರಾಜಕೀಯವನ್ನು ಬಿಡಬೇಕು ಎಂದು ಸೀಸಂದ್ರ ಗೋಪಾಲಗೌಡ ಟೀಕಿಸಿದರು.
ಚಿತ್ರ: ಸೀಸಂದ್ರ ಗೋಪಾಲಗೌಡ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್