ನಕಲಿ ಜಾತಿ ಪ್ರಮಾಣ ಪತ್ರದ ಒಳಸುಳಿಯಲ್ಲಿ ಶಾಸಕ ಕೊತ್ತೂರು ಮಂಜುನಾಥ್
ನಕಲಿ ಜಾತಿ ಪ್ರಮಾಣ ಪತ್ರದ ಒಳಸುಳಿಯಲ್ಲಿ ಶಾಸಕ ಕೊತ್ತೂರು ಮಂಜುನಾಥ್
ಶಾಸಕ ಕೊತ್ತೂರು ಮಂಜುನಾಥ್


ಕೋಲಾರ, 19 ಡಿಸೆ0ಬರ್ (ಹಿ.ಸ.) :

ಆ್ಯಂಕರ್ : ಶತಮಾನಗಳಿಂದ ಶೋಷಣೆ ಹಾಗೂ ಧ್ವನಿಯಿಲ್ಲದ ವರ್ಗಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲೀಕರಣಗೊಂಡು ಸಮಾಜದ ಮುಖ್ಯವಾಹಿನಿಗೆ ಸೇರುವ ಉದ್ದೇಶದಿಂದ ಸಂವಿಧಾನದಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಆದರೆ ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿರುವ ಅನೇಕ ಉದಾಹರಣೆಗಳು ಕಂಡುಬ0ದಿವೆ. ಕೆಲವರು ನಕಲಿ ಜಾತಿ ಪ್ರಮಾಣ ಪತ್ರಗಳ ಮೂಲಕ ಮೀಸಲಾತಿಯ ಸೌಲಭ್ಯ ಪಡೆದು ಶಾಸನಸಭೆಗಳಿಗೆ ಪ್ರವೇಶಿಸಿರುವ ಪ್ರಸಂಗಗಳೂ ಈ ಹಿಂದೆ ದಾಖಲಾಗಿವೆ.

ಬುಡ್ಗ ಜಂಗಮರು ಪರಿಶಿಷ್ಠ ಜಾತಿಗೆ ಸೇರಿದವರೆಂದು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ವಿಧಾನಸಭೆಗೆ ಪ್ರವೇಶಿಸಿದ ಕೊತ್ತೂರು ಮಂಜುನಾಥ್ ಪ್ರಕರಣ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹಣಬಲದಿಂದ ಮೀಸಲಾತಿಯನ್ನು ಕಬಳಿಸಿ ಶಾಸನಸಭೆಗೆ ಪ್ರವೇಶಿಸಿದ ಮಂಜುನಾಥ್, ತಾನು ಬುಡ್ಗ ಜಂಗಮ ಜಾತಿಗೆ ಸೇರಿದವನೆಂದು ಹೇಳುವ ಮೂಲಕ ಶೋಷಿತ ವರ್ಗಗಳನ್ನು ವಂಚಿಸಿದ್ದಾರೆ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲು ಅನುಸರಿಸಿದ ಈ ವಂಚನೆಯ ಕ್ರಮವನ್ನು ರಾಜ್ಯದ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎಳೆಎಳೆಯಾಗಿ ಬಯಲಿಗೆಳೆದಿವೆ. ವಂಚನೆಗೆ ಅನೇಕ ಮಾರ್ಗಗಳಿರಬಹುದು; ಆದರೆ ಎಲ್ಲಾ ಕಾಲಕ್ಕೂ ವಂಚನೆ ಮಾಡಲಾಗದು.

ಶೋಷಣೆಗೆ ಒಳಗಾದವರು ರಾಜಕೀಯ ಪಾಲು ಪಡೆಯಲು ಶಾಸನ ಸಭೆಗಳಿಗೆ ಆಯ್ಕೆಯಾಗಲು ಮೀಸಲಾತಿ ಕಲ್ಪಿಸಲಾಗಿದೆ. ಕಾರಣ ಹಣ ಬಲ ತೋಳ್ಬಲವನ್ನು ಮೆಟ್ಟಿ ಶೋಷಣೆಗೆ ಒಳಗಾದವರು ಸಾಮಾನ್ಯ ಕ್ಷೇತ್ರಗಳಿಂದ ಸ್ಪರ್ಧಿಸಲು ಸಾಧ್ಯವಿಲ್ಲ. ಶೋಷಿತ ವರ್ಗಗಳಿಗೆ ಮೀಸಲು ಮಾಡಿರುವ ಕ್ಷೇತ್ರದಲ್ಲಿ ಸಂವಿಧಾನವನ್ನು ಅಣಕಿಸುವಂತೆ ವಂಚನೆಯ ಮೂಲಕ ಶಾಸನ ಸಭೆ ಪ್ರವೇಶ ಮಾಡಿ ಮೀಸಲಾತಿಯನ್ನು ಕದ್ದು ತಾನು ಶೋಷಿತ ಸಮುದಾಯಕ್ಕೆ ಸೇರಿದವನು ಎಂದು ಪ್ರತಿಪಾದಿಸಿದ ಶಾಸಕ ಕೊತ್ತೂರು ಮಂಜುನಾಥ್ ಅಡ್ಡದಾರಿಯಿಂದ ಸುಳ್ಳು ಜಾತಿ ಪ್ರಮಾಣ ಪತ್ರಪಡೆದು ವಂಚನೆ ಮಾಡಿದ್ದು ಸುಪ್ರೀಮ್ ಕೋರ್ಟ್ ಕಠೋಕ್ತಿಯಲ್ಲಿ ಅವರ ನಡವಳಿಕೆಯನ್ನು ಟೀಕಿಸಿದೆ.

ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸನ ಸಭೆ ಪ್ರವೇಶ ಮಾಡಲು ಮಂಜುನಾಥ್ ಅನುಸರಿಸಿದ ವಂಚನೆಗೆ ಎರಡು ದಶಕಗಳ ಇತಿಹಾಸವಿದೆ. ತಾಲ್ಲೂಕು ಕಚೇರಿ ಹಾಗು ಜಿಲ್ಲಾಧಿಕಾರಿಗಳ ಕಛೇರಿಯನ್ನು ದುರ್ಬಳಕೆ ಮಾಡಿಕೊಂಡು ನಕಲಿ ಜಾತಿ ಪ್ರಮಾಣ ಪತ್ರವನ್ನು ಪಡೆದ ಬಗ್ಗೆ ಹಾಗು ಆತ ಹಿಂದುಳಿದ ವರ್ಗ ಬೈರಾಗಿ ಜಾತಿಗೆ ಸೇರಿದ್ದರು ಸಹ ಬುಡ್ಗ ಜಂಗಮ ಜಾತಿಗೆ ಸೇರಿದನೆಂದು ಪ್ರತಿಪಾದಿಸಿದ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ತಮ್ಮ ತೀರ್ಪಿನಲ್ಲಿ ಎಳೆಯಾಗಿ ಬಿಡಿಸಿ ಹೇಳಿದ್ದಾರೆ.ಸಂವಿಧಾನವನ್ನು ಅಣಕಿಸುವಂತೆ ವಂಚನೆ ಮಾಡಲಾಗಿದೆ .ವಂಚನೆಯೇ ಮಂಜುನಾಥ್ ರವರಿಗೆ ಪೇಟೆಂಟ್ ಆಗುತ್ತದೆ ಎಂದು ತಮ್ಮ ತೀರ್ಪಿನಲ್ಲಿ ಮಾರ್ಮಿಕವಾಗಿ ಉಲ್ಲೇಖಿಸಿದ್ದಾರೆ.

ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿದ ಮಂಜುನಾಥ್ ವಿರುಧ್ಧ ಆರು ವರ್ಷಗಳನಂತರ ಸಹ ತನಿಖೆ ನಡಿಸದೆ ಗಾಢ ನಿದ್ರೆಗೆ ಜಾರಿದ ಜಾರಿ ನಿರ್ದೇನಾಲಯದ ಪೋಲೀಸರ ನಡವಳಿಕೆಯ ಬಗ್ಗೆ ನ್ಯಾಯಮೂರ್ತಿ ನಾಗಪ್ರಸನ್ನ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.ಜಾರಿ ನಿರ್ದೇಶನದ ಪೋಲೀಸರು ದಾಖಲು ಮಾಡಿರುವ ಎಫ್.ಐ.ಆರ್ ರದ್ದು ಪಡಿಸಲು ಸುಪ್ರೀಮ್ ಕೋರ್ಟ್ ನಿರಾಕರಿಸಿದೆ. ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಾರಣ ನಾಗರೀಕ ಜಾರಿ ನಿರ್ದೇಶನಾಲಯದ ಪೋಲೀಸರು ಆಮೆ ನಡಿಗೆಯಲ್ಲಿ ತನಿಖೆ ನಡೆಸುತ್ತಿದ್ದಾರೆ. ರೋಗಿಯ ಪರಿಸ್ಥಿತಿ ಗಂಭೀರವಾಗಿದ್ದು ಆತನನ್ನು ಉಳಿಸಲು ಕೃತಕ ಉಸಿರಾಟ ಕಲ್ಪಿಸಿ ಐ.ಸಿ .ಯು ಘಟದಲ್ಲಿ ಇರಿಸುತ್ತಾರೆ. ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ರೋಗಿ ಕ್ರಟಿಕಲ್ ಕೇರ್‌ನಲ್ಲಿದ್ದಾನೆ.

ಆತನನ್ನು ಉಳಿಸಲು ಎಲ್ಲ ರೀತೀಯ ಪ್ರಯತ್ನ ನಡೆಸುತ್ತಿದ್ದೇವೆ. ರೋಗಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗತ್ತದೆ. ಕೊತ್ತೂರು ಮಂಜುನಾಥ್ ಸುಳ್ಳು ಜಾತಿ ಪ್ರಮಾಣ ಪತ್ರದ ಒಳಸುಳಿಯಿಂದ ಹೊರ ಬರಲು ನಡೆಸಿದ ಕಾನೂನು ಹೋರಾಟದಲ್ಲಿ ತೀವ್ರ ಹಿನ್ನಡೆಯಾಗಿದೆ. ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಬಾಕಿ ಇದ್ದು ಇತ್ಯರ್ಥಪಡಿಸುವಂತೆ ಸುಪ್ರೀಮ್ ಕೋರ್ಟ್ ನಿರ್ದೇಶನ ನೀಡಿದೆ.ನ್ಯಾಯಾಲಯಗಳ ತೀರ್ಪು ವ್ಯತಿರಕ್ತವಾದಾಗ ಸರ್ಕಾರ ತಾನು ಏನೂ ಮಾಡಲಾಗದು ಎಂದು ಹಿಂದೆ ಸರಿಯುತ್ತದೆ. ಆಗ ನಾವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದೆವು. ರೋಗಿಯನ್ನು ಉಳಿಸಲಾಗಲಿಲ್ಲ ಎಂದು ವೈದ್ಯರು ಹೇಳುವಂತೆ ಸರ್ಕಾರ ಸಹ ಮಂಜುನಾಥ್ ಪ್ರಕರಣದಲ್ಲಿ ಹಿಂದೆ ಸರಿಯುತ್ತದೆ.

ಕಾಂಗ್ರೆಸ್ ಪಕ್ಷದಲ್ಲಿ ಇರುವ ಕಾರಣ ನಾಗರೀಕ ಜಾರಿನಿರ್ದೇಶನಾಲಯ ತನಿಖೆಯನ್ನು ನಡೆಸುತ್ತಿಲ್ಲ. ಕೊತ್ತೂರು ಮಂಜುನಾಥ್ ಮೊದಲಬಾರಿಗೆ ತಾನು ಬುಡ್ಗ ಜಂಗಮ ಜಾತಿಗೆ ಸೇರಿದವನಾಗಿದ್ದು ನನ್ನ ಪೋಷಕರು ಅವಿದ್ಯಾವಂತರಾಗಿದ್ದು ತನ್ನನ್ನು ಬುಡ್ಗ ಜಂಗಮ ಜಾತಿಗೆ ಸೇರಿದವನೆಂದು ಘೋಷಣೆ ಮಾಡುವಂತೆ ಮುಳಬಾಗಿಲಿನ ಮುನ್ಸೀಫ್ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸುತ್ತಾರೆ. ಆನಂತರ ತಿದ್ದುಪಡಿ ಅರ್ಜಿಸಲ್ಲಿಸಿ ಶಾಲಾ ದಾಖಲಾತಿಗಳಲ್ಲಿ ಬೈರಾಗಿ ಜಾತಿಗೆ ಸೇರಿದವನು ಎಂದು ನಮೂದಿಸಲಾಗಿದೆ.

ಬುಡ್ಗ ಜಂಗಮ ಎಂದು ತಿದ್ದುಪಡಿ ಮಾಡುವಂತೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಅರ್ಜಿಯನ್ನು ವಾಪಸ್ ಪಡೆಯುತ್ತಾರೆ. ಆನಂತರ ಮುಳಬಾಗಿಲು ತಾಶಿಲ್ದಾರ್‌ಗೆ ಅರ್ಜಿ ನೀಡಿ ತಾನು ಬುಡ್ಗ ಜಂಗಮ ಪರಿಶಿಷ್ಠ ಜಾತಿಗೆ ಸೇರಿದವನಾಗಿದ್ದು ಜಾತಿ ಪ್ರಮಾಣ ಪತ್ರ ನೀಡುವಂತೆ ಅರ್ಜಿ ಸಲ್ಲಿಸುತ್ತಾರೆ. ಅರ್ಜಿಯನ್ನು ತಾಶೀಲ್ದಾರ್ ತಿರಸ್ಕರಿಸುತ್ತಾರೆ. ತಹಶೀಲ್ದಾರ್ ಹಿಂಬರಹವನ್ನು ಪ್ರಶ್ನೆ ಮಾಡಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸುತ್ತಾರೆ.ಕಳೆದ ೨೦೦೮ ರಲ್ಲಿ ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿದ ಹೈಕೋರ್ಟ್ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಮುಂದೆ ಅರ್ಜಿ ಸಲ್ಲಿಸುವಂತೆ ನಿರ್ದೇಶನ ನೀಡುತ್ತದೆ.ಜಿಲ್ಲಾಧಿಕಾರಿ ರಾಮಚಂದ್ರ ಅಧ್ಯಕ್ಷತೆಯ ಸಮಿತಿ ಮಂಜುನಾಥ್ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸುತ್ತದೆ. ಮರಳಿ ಯತ್ನವ ಮಾಡು ಎಂಬ0ತೆ ಕೊತ್ತೂರು ಮಂಜುನಾಥ್ ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಾರೆ.

ನಾಲ್ಕು ವರ್ಷಗಳನಂತರ ಮತ್ತೆ ಜಿಲ್ಲಾಧಿಕಾರಿಗಳಿಗೆ ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಂತೆ ಮನವಿ ಸಲ್ಲಿಸುತ್ತಾರೆ. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮುಳಬಾಗಿಲು ತಾಶೀಲ್ದಾರ್ ೦೩-೦೪-೨೦೧೨ ರಲ್ಲಿ ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರ ನೀಡುತ್ತಾರೆ. ಮುರಳಿಧರ್ ಎಂಬುವರು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣ ಪತ್ರದ ವಿವರಗಳನ್ನು ಕೇಳುತ್ತಾರೆ. ಕಛೇರಿಯ ಕಡತಗಳನ್ನು ಪರಿಶಿಲಿಸಲಾಗಿ ಮಂಜುನಾಥ್ ಬುಡ್ಗ ಜಂಗಮ ಜಾತಿಗೆ ಸೇರಿಲ್ಲ. ಕಛೇರಿಯ ಗಣಕ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ೨೬ -೧೧-೨೦೧೦ ರಂದು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಅಕ್ರಮವಾಗಿ ಪಡೆದ ಜಾತಿಪ್ರಮಾಣ ಪತ್ರವನ್ನು ರದ್ದುಪಡಿಸಲಾಗಿದೆ ಎಂದು ಮುಳಬಾಗಿಲು ತಾಶೀಲ್ದಾರ್ ತಾರಿಖು ೧೪-೦೩-೨೦೧೩ ರಲ್ಲಿ ಹಿಂಬರಹ ನೀಡುತ್ತಾರೆ.

ತಾಶೀಲ್ದಾರ್ ನೀಡಿದ ಹಿಂಬರಹವನ್ನು ಪ್ರಶ್ನಿಸಿ ಕೊತ್ತೂರು ಮಂಜುನಾಥ್ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಪಡೆಯತ್ತಾರೆ. ಕಳೆದ ೨೦೧೩ ರಲ್ಲಿ ಮಂಜುನಾಥ್ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಸ್ದರ್ಧಿಸಿ ಶಾಸಕರಾಗಿ ಆಯ್ಕೆಯಾಗುತ್ತಾರೆ. ಆ ವೇಳೆಗೆ ವಂಚನೆ ಪೇಟೆಂಟ್ ಆಗುತ್ತದೆ. ಪರಾಜಿತ ಅಭ್ಯರ್ಥಿ ಮುನಿ ಆಂಜನಪ್ಪ ಇತರರು ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಮಂಜುನಾಥ್ ಬುಡ್ಗ ಪರಿಶಿಷ್ಠ ಜಾತಿಗೆ ಸೇರಿಲ್ಲ ಎಂಬ ಕಾರಣಕ್ಕಾಗಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಮಾಡಿತು.

ಕೊತ್ತೂರು ಮಂಜುನಾಥ್ ಆಯ್ಕೆಯನ್ನ ರಾಜ್ಯ ಹೈಕೋರ್ಟ್ ರದ್ದುಪಡಿಸಿ ಆದೇಶ ಮಾಡಿದಾಗ ಎರಡನೇ ಬಾರಿ ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸಲು ಮಂಜುನಾಥ್ ನಾಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಪರಿಶೀಲನೆಗೆ ಎರಡು ದಿನ ಇರುವಾಗ ಈ ಆದೇಶ ಹೊರಬಿದ್ದಿತು. ಮಂಜುನಾಥ್ ಬುಡ್ಗ ಜಂಗಮ ಜಾತಿಗೆ ಸೇರಿದವರು ಎಂಬುದನ್ನು ಸಾಬೀತು ಪಡಿಸದ ಕಾರಣ ಅರ್ಜಿಯನ್ನು ತಿರಸ್ಕರಿಸಲಾಯಿತು. ಹೈಕೋರ್ಟ್ ಆದೇಶದ ವಿರುಧ್ಧ ಸುಪ್ರೀಮ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು. ಆದರೆ ತಡೆಯಾಜ್ಞೆ ಸಿಗದ ಕಾರಣ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿಯನ್ನು ಚುನಾವಣಾಧಿಕಾರಿ ತಿರಸ್ಕರಿಸಿದರು.

ನಾನು ಬುಡ್ಗ ಜಂಗಮ ಜಾತಿಗೆ ಸೇರಿದವನು ಹೈಕೋರ್ಟ್ ನನ್ನ ಜಾತಿ ಹಿನ್ನಲೆಯನ್ನು ಪರಿಗಣಿಸಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನಾ ಸಮಿತಿಗೆ ನಿರ್ದೇಶನ ನೀಡಬೇಕು. ಸಮಿತಿ ಪರಿಶೀಲಿಸಿ ವರದಿ ನೀಡಬೇಕೇಂದು ಸುಪ್ರೀಮ್ ಕೋರ್ಟ್ಗೆ ಅರ್ಜಿಸಲ್ಲಿಸಿದರು. ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಮ್ ಕೋರ್ಟ್ ಕೋಲಾರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ ಮೂರು ತಿಂಗಳಲ್ಲಿ ವರದಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿತ್ತು.

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ವಿಚಾರಣೆ ನಡೆಸಿ ಮಂಜುನಾಥ್ ಬುಡ್ಗಮ ಜಂಗಮ ಜಾತಿಗೆ ಸೇರಿಲ್ಲ.ಬದಲಾಗಿ ಹಿಂದುಳಿದ ವರ್ಗಕ್ಕೆ ಸೇರಿರುವುದಾಗಿ ವರದಿ ಸಲ್ಲಿಸಿದರು. ವರದಿಯನ್ನು ಅಂಗಿಕರಿಸಿದ ಸುಪ್ರೀಮ್ ಕೋರ್ಟ್ ಜಲ್ಲಾದಿಕಾರಿಗಳ ವರದಿಯನ್ನು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡುವಂತೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು. ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ನೀಡಿದ್ದ ವರದಿಯನ್ನು ಪ್ರಶ್ನೆ ಮಾಡಿ ಮಂಜುನಾಥ್ ಹೈ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು. ಆದರೆ ಎರಡನೇ ಬಾರಿ ಸಹ ಹೈಕೋರ್ಟ್ ಮಂಜುನಾಥ್‌ರವರ ಅರ್ಜಿಯನ್ನು ತಿರಸ್ಕರಿಸಿತು. ಬುಡ್ಗ ಜಂಗಮ ಜಾತಿಯವರು ಕೋಲಾರ ಜಿಲ್ಲೆಯಲ್ಲಿ ಇರುವುದಾಗಿ ಕೋಲಾರ ಜಿಲ್ಲಾ ಗೆಜೆಟೀಯರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಂಜುನಾಥ್ ವಾದವನ್ನು ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿಯವರು ತಳ್ಳಿ ಹಾಕಿದರು. ಅವರು ನೀಡಿದ ವರದಿ ಮಂಜುನಾಥ್ ಪಾಲಿಗೆ ಮರಣ ಶಾಸನವಾಯಿತು.

ಕೋಲಾರ ನಾಗರೀಕ ಜಾರಿ ನಿರ್ಧೇಶನಾಲಯ ದಾಖಲು ಮಾಡಿರುವ ಎಫ್.ಐ.ಆರ್ ರದ್ದುಪಡಿಸುವಂತೆ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ಸಹ ತಿರಸ್ಕರಿಸಿದೆ. ೨೦೦೮ ರಿಂದ ತಾನು ಬುಡ್ಗ ಜಂಗಮ ಎಂದು ಹೇಳುತ್ತಾ ತಹಶೀಲ್ದಾರ್ ಕಛೇರಿಯಿಂದ ಹಿಡಿದು ಸುಪ್ರಿಂ ಕೋರ್ಟ್ ತನಕ ಮಂಜುನಾಥ್ ಪ್ರಯತ್ನ ನಡೆಸುತ್ತಲೆ ಬಂದಿದ್ದಾರೆ. ಅವರ ಪ್ರಯತ್ನ ಹೇಗಿದೆ ಎಂದರೆ ಎಸ್.ಎಸ್.ಎಲ್.ಸಿ.ಯಲ್ಲಿ ಪದೇಪದೇ ಅನುತ್ತೀರ್ಣರಾಗಿ ಹೇಗಾದರೂ ಸರಿ ಉತ್ತೀರ್ಣ ಆಗಬೇಕೆಂದು ಖಾಸಗಿಯಾಗಿ ಪರೀಕ್ಷೆ ಬರೆದು, ದುಡ್ಡು ಕೊಟ್ಟು ಉತ್ತಿರ್ಣ ಆಗುವ ಅಭ್ಯರ್ಥಿ ರೀತಿ ಇದೆ.

ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸಲು ನಾಮಪತ್ರ ತಿರಸ್ಕೃತ ಆದ ನಂತರ ಮಂಜುನಾಥ್ ೨೦೨೩ರಲ್ಲಿ ಕೋಲಾರ ವಿಧಾನಸಭಾ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಅವರ ವಿರುದ್ಧ ಇರುವ ಸುಳ್ಳು ಜಾತಿ ಪ್ರಮಾಣ ಪತ್ರ ತನಿಖೆ ಜಾಡು ತಪ್ಪಿದೆ.

ಚಿತ್ರ : ಶಾಸಕ ಕೊತ್ತೂರು ಮಂಜುನಾಥ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande