ಕೋಲಾರ ನಗರದ ಸೌಂದರೀಕರಣಕ್ಕೆ ಸಮಗ್ರ ಯೋಜನೆ : ಜಿಲ್ಲಾಧಿಕಾರಿ ಎಂ.ಆರ್.ರವಿ
ಕೋಲಾರ ನಗರದ ಸೌಂದರೀಕರಣಕ್ಕೆ ಸಮಗ್ರ ಯೋಜನೆ ; ಜಿಲ್ಲಾಧಿಕಾರಿ ಎಂ.ಆರ್.ರವಿ
ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಕೋಲಾರ ನಗರದ ಸಮಗ್ರ ಸೌಂದರೀಕರಣದ ಬಗ್ಗೆ ವಿವಿಧ ಸಂಘ ಸಂಸ್ಥೆಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದರು.


ಕೋಲಾರ, ಡಿಸೆಂಬರ್ ೧೯ (ಹಿ.ಸ) :

ಆ್ಯಂಕರ್ : ಕೋಲಾರ ನಗರವನ್ನು ಸುಂದರ ಮತ್ತು ಸ್ವಚ್ಛ ಶಿಸ್ತಿನ ನಗರವನ್ನಾಗಿ ರೂಪಿಸಲು ಜಿಲ್ಲಾಡಳಿತ, ನಗರಸಭೆಯ ಜೊತೆಗೆ ಖಾಸಗಿ ವ್ಯಕ್ತಿ, ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಸೇರಿದಂತೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ. ಆರ್ ರವಿ ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ನಗರಸಭೆ ಆಯೋಜಿಸಿದ್ದ ಸಭೆಯಲ್ಲಿ ಕೋಲಾರ ನಗರವನ್ನು ಕೋಲಾರ ನಗರದ ಪ್ರತಿಷ್ಠಿತ ಉದ್ದಿಮೆದಾರರು, ಬೃಹತ್ ವ್ಯಾಪಾರಿಗಳು, ಹಿರಿಯ ಗಣ್ಯರವರುಗಳ ಸಹಭಾಗಿತ್ವದಲ್ಲಿ ಕೋಲಾರ ನಗರದ ಪ್ರಮುಖ ವೃತ್ತಗಳು ಹಾಗೂ ಉದ್ಯಾನವನಗಳನ್ನು ವಿವಿಧ ಹಂತದಲ್ಲಿ ಅಭಿವೃದ್ಧಿ ಪಡಿಸುವ ಕುರಿತ ಸಭೆಯಲ್ಲಿ ಮಾತನಾಡಿದರು.

ಐತಿಹಾಸಿಕ ಹಿನ್ನೆಲೆಯ ಕೋಲಾರ ನಗರ ಈಗಲೂ ಮೂಲಭೂತ ಸೌಕರ್ಯಗಳಲ್ಲಿ ಹಿಂದುಳಿದಿದ್ದು, “ಇದು ನನ್ನ ನಗರ” ಎನ್ನುವ ಭಾವನೆಯ ಜೊತೆ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕೆಂದು ಹೇಳಿದರು.

ನಗರದ ರಸ್ತೆಗಳು, ಪಾದಚಾರಿ ಮಾರ್ಗ, ಶೌಚಾಲಯ, ಟ್ರಾಫಿಕ್ ನಿಯಂತ್ರಣ ಹಾಗೂ ಸೂಚನಾ ಫಲಕಗಳ ಕೊರತೆಯಿಂದ ನಾಗರಿಕರು ದಿನನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಭೆಯ ಗಮನ ಸೆಳೆದರು. ರಾಜ್ಯದ ಬೇರೆ ನಗರಗಳು ವೇಗವಾಗಿ ಬೆಳೆಯುತ್ತಿರುವಾಗ, ಬೆಂಗಳೂರಿಗೆ ಹತ್ತಿರವಿದ್ದರೂ ಕೋಲಾರ ಆಭಿವೃಧ್ಧಿ ವಿಚಾರದಲ್ಲಿ ಹಿಂದುಳಿದಿದೆ. ಈ ಪರಿಸ್ಥಿತಿಯನ್ನು ಬದಲಿಸಲು ಜಿಲ್ಲಾಡಳಿತ ಮತ್ತು ಸಾರ್ವಜನಿಕರ ಸಂಯುಕ್ತ ಪ್ರಯತ್ನ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಸುರಕ್ಷಿತವಾಗಿ ಓಡಾಡುವ ರಸ್ತೆ, ಹಿರಿಯರು ವಿಶ್ರಾಂತಿ ಪಡೆಯುವ ಪಾರ್ಕ್, ಕುಟುಂಬಗಳಿಗೆ ಸಮಯ ಕಳೆಯಲು ಸಾರ್ವಜನಿಕ ಸ್ಥಳಗಳು ದೊರಕುವಂತೆ ಕೋಲಾರವನ್ನು “ಲವಬಲ್ ಮತ್ತು ಲಿವಬಲ್ ಸಿಟಿ”ಯಾಗಿ ರೂಪಿಸುವುದು ಮುಖ್ಯ ಗುರಿ ಎಂದು ತಿಳಿಸಿದರು. ಮನೆಯಲ್ಲಿ ಇರುವಷ್ಟು ಶಿಸ್ತು ಮತ್ತು ಸ್ವಚ್ಛತೆ ನಗರದಲ್ಲೂ ಇರಬೇಕು, ನಗರ ನಮ್ಮ ಮನೆ ಎಂಬ ಭಾವನೆ ಬೆಳೆಸಿದರೆ ಸಮಸ್ಯೆಗಳ ಬಹುಪಾಲು ಸ್ವಯಂ ನಿವಾರಣೆಯಾಗುತ್ತವೆ ಎಂದು ಅವರು ಹೇಳಿದರು.

ನಗರದಲ್ಲಿರುವ ೧೨ ಸರ್ಕಲ್‌ಗಳಲ್ಲಿ ಒಂದೂ ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲವೆಂದು ಸೂಚಿಸಿ, ಸರ್ಕಲ್‌ಗಳು ಹಾಗೂ ಪ್ರಮುಖ ಪಾರ್ಕ್ಗಳನ್ನು ಮಾದರಿ ರೂಪದಲ್ಲಿ ವ್ಯವಹರಿಸುವ ಯೋಜನೆಯನ್ನು ಮಂಡಿಸಿದರು. ಶಾಲೆಗಳ ಎದುರು “ಸ್ಕೂಲ್ ಜೋನ್” ಫಲಕ, ಟ್ರಾಫಿಕ್ ಸಿಗ್ನಲ್, ಮಾರ್ಗಸೂಚನಾ ಫಲಕ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ, ಪಾರ್ಕ್ಗಳನ್ನು ಮಕ್ಕಳ ಆಟ ಆಡಲು ಸ್ಥಳ, ಹಿರಿಯರ ಕುಳಿತುಕೊಳ್ಳುವ ವ್ಯವಸ್ಥೆಯೊಂದಿಗೆ ಸುಂದರಗೊಳಿಸಬೇಕೆAದು ಸಭೆಯಲ್ಲಿ ತೀರ್ಮಾನಿಸಲಾಯಿತು.

“ಹನಿ ಹನಿ ಗುಡಿದ ಹಳ್ಳ” ಎಂಬ ಮಾತನ್ನು ಉಲ್ಲೇಖಿಸಿ, ಪ್ರತಿ ನಾಗರಿಕ, ಬ್ಯಾಂಕ್, ಕಂಪನಿ ಮತ್ತು ಸ್ವಯಂಸೇವಾ ಸಂಸ್ಥೆಗಳು ತಮ್ಮ ಮಟ್ಟಿಗೆ ಒಂದು ವೃತ್ತ ಅಥವಾ ಒಂದು ಉದ್ಯಾನವನ ಅಭಿವೃದ್ಧಿ ಮಾಡಿ ನಿರ್ವಹಣೆಗೆ ಮುಂದಾದರೆ ನಗರದ ಮುಖವೇ ಬದಲಾಗಬಹುದು ಎಂದು ಕರೆ ನೀಡಿದರು. ಹಣವನ್ನು ಸರ್ಕಾರಕ್ಕೆ ದೇಣಿಗೆ ರೂಪದಲ್ಲಿ ಕೊಡುವುದಕ್ಕಿಂತ, ನೇರವಾಗಿ ಅಭಿವೃದ್ಧಿ ಕಾರ್ಯ ಮಾಡಿ, ತಮ್ಮ ಸಂಸ್ಥೆಯ ಹೆಸರಿನಲ್ಲಿ “ಅಭಿವೃದ್ಧಿ ಮತ್ತು ನಿರ್ವಹಣೆ” ಎಂಬ ಫಲಕ ಹಾಕಿಕೊಳ್ಳುವ ಅವಕಾಶವನ್ನು ನಗರಸಭೆ ನೀಡಲು ಸಿದ್ಧವಿದೆ ಎಂದು ಅವರು ತಿಳಿಸಿದರು.

ನಗರಾಭಿವೃದ್ಧಿಗೆ ವಿಶಿಷ್ಟ ಮಾದರಿ ಡಿಸೈನ್ ಸಿದ್ಧಪಡಿಸಿರುವುದಾಗಿ ತಿಳಿಸಿ, ಅದರ ಆಧಾರದ ಮೇಲೆ ಸರ್ಕಲ್, ಪಾರ್ಕ್ ಮತ್ತು ರಸ್ತೆಗಳ ರೂಪಾಂತರಕ್ಕೆ ಕಾರ್ಯಯೋಜನೆ ರೂಪಿಸಲಿರುವುದಾಗಿ ಸಭೆಯಲ್ಲಿ ತಿಳಿಸಲಾಯಿತು.ನಗರದ ೧೧ ಪ್ರಮುಖ ವೃತ್ತಗಳನ್ನು ಗುರುತಿಸಲಾಗಿದ್ದು, ಅಲ್ಲಿ ಫುಟ್‌ಪಾತ್ ಟೈಲ್ಸ್ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಎಸ್.ಎಸ್ ರೈಲಿಂಗ್ಸ್ ಅಳವಡಿಸಬೇಕು ಎಂದು ಸೂಚಿಸಿದರು.ರಸ್ತೆ ಮೀಡಿಯನ್‌ಗಳಲ್ಲಿ ಸುಂದರವಾದ ಸಸ್ಯಗಳ ಪೋಷಣೆ ಹಾಗೂ ಬೋಲಾರ್ಡ್ ಲೈಟಿಂಗ್ಸ್ (ಜಾಹೀರಾತು ಫಲಕಗಳ ಸಹಿತ) ಅಳವಡಿಕೆಗೆ ಆದ್ಯತೆ ನೀಡಲಾಗಿದೆ.ನಗರದ ೧೦ ಪ್ರಮುಖ ಪಾರ್ಕ್ಗಳಲ್ಲಿ ಪಾಥ್ ವೇ ನಿರ್ಮಾಣ, ಗಾರ್ಡನ್ ಲೈಟಿಂಗ್ಸ್ ಮತ್ತು ಓಪನ್ ಜಿಮ್ ಸಲಕರಣೆಗಳನ್ನು ಅಳವಡಿಸಿ ಸಾರ್ವಜನಿಕ ಸ್ನೇಹಿಯಾಗಿಸಲಾಗುವುದು ಎಂದರು.

ಅಂಬೇಡ್ಕರ್ ವೃತ್ತ ಮತ್ತು ಎ.ಪಿ.ಎಂ.ಸಿ ವೃತ್ತ ತಲಾ ೧೭ ಲಕ್ಷ, ರಾಣಿ ಚೆನ್ನಮ್ಮ ವೃತ್ತ ೧೬ ಲಕ್ಷ, ಕ್ಲಾಕ್ ಟವರ್ ವೃತ್ತ ೧೪ ಲಕ್ಷ ಶ್ರೀನಿವಾಸಪುರ ಮತ್ತು ಅರಹಳ್ಳಿ ವೃತ್ತ ತಲಾ ೧೩ ಲಕ್ಷ, ಕುವೆಂಪು ಉದ್ಯಾನವನ (ಮ್ಯೂಸಿಕ್ ಸಿಸ್ಟಂ ಸಹಿತ) ೬ ಲಕ್ಷ, ಇವುಗಳಲ್ಲದೆ ಗಂಗಮ್ಮ ದೇವಸ್ಥಾನ ವೃತ್ತ ೮ ಲಕ್ಷ, ಟ್ರಯಾಂಗಲ್ ಸರ್ಕಲ್ ೮ ಲಕ್ಷ, ಮೇಖಿ ವೃತ್ತ ೧೨ ಲಕ್ಷ, ಕೋಲಾರಮ್ಮ ದೇವಸ್ಥಾನ ವೃತ್ತ ೧೦ ಲಕ್ಷ ,ಮತ್ತು ಡೂಂ ಲೈಟ್ ವೃತ್ತಗಳನ್ನು ೧೨ ಲಕ್ಷದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಅಮೃತ್ ಯೋಜನೆ ಅಡಿಯಲ್ಲಿ ನಗರದ ಸರ್ವಜ್ಞ,ಕುವೆಂಪು ಉದ್ಯಾನವನ ಅಭಿವೃದ್ಧಿಗೆ ತಲಾ ೩೧ ಲಕ್ಷ ರೂಪಾಯಿ ಮತ್ತು ಪಾಲಸಂದ್ರ ಬಡಾವಣೆಯ ಉದ್ಯಾನವನ ಅಭಿವೃದ್ಧಿಗೆ ೧ ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ ಎಂದರು.

ಕೋಲಾರ ನಗರಾಭಿವೃದ್ಧಿ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಅವರು ಮಾತನಾಡಿ ಕೋಲಾರದಲ್ಲಿನ ಶ್ರೀನಿವಾಸಪುರ ವೃತ್ತ, ಮಾಲೂರು ವೃತ್ತ,ಕ್ಲಾಕ್ ಟವರ್ ವೃತ್ತಗಳು ಸೇರಿದಂತೆ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಕುರಿತು ಪ್ರಾಧಿಕಾರದಲ್ಲಿ ನಿರ್ಣಯ ಮಾಡಿರುವುದಾಗಿ ತಿಳಿಸಿ ಕೊಡಿಕಣ್ಣೂರು ಕೆರೆಯ ಸಮಗ್ರ ಅಭಿವೃದ್ಧಿಗೆ ನಾಲ್ಕು ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ತಿಳಿಸಿದರು.

ಸಿ.ಬೈರೇಗೌಡ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೃಷ್ಣಾರೆಡ್ಡಿ ಅವರು ನಗರದ ಬಸ್ ನಿಲ್ದಾಣದ ಬಳಿ ಇರುವ ಪಲ್ಲವಿ ವೃತ್ತದ ಸಮಗ್ರ ಅಭಿವೃದ್ಧಿಯನ್ನು ಮಾಡುವುದಾಗಿ, ಸಮಾಜ ಸೇವಕರಾದ ಸಿ.ಎಂ.ಆರ್.ಶ್ರೀನಾಥ್ ಅವರು ಮೆಕ್ಕೆ ವೃತ್ತವನ್ನು ಅಭಿವೃದ್ಧಿ ಮಾಡುವುದಾಗಿ, ಕ್ಯಾನ್ ನೆಟ್ವರ್ಕ್ ವತಿಯಿಂದ ಪ್ಲಾಸ್ಟಿಕ್ ಮುಕ್ತ ಕೋಲಾರ ಪರಿಸರ ನಿರ್ಮಾಣ ಮಾಡುತ್ತಿದ್ದೇವೆ, ಆರ್.ವಿ.ಶಿಕ್ಷಣ ಸಂಸ್ಥೆ ವತಿಯಿಂದ ಡೂಮ್ ಲೈಟ್ ವೃತ್ತವನ್ನು ಅಭಿವೃದ್ಧಿ ಮಾಡಿ ನಮ್ಮ ಹೆಮ್ಮೆ ನಮ್ಮ ಕೋಲಾರಕ್ಕೆ ನಮ್ಮ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು,ದೇವರಾಜ ಅರಸು ಶಿಕ್ಷಣ ಸಂಸ್ಥೆ ಯಿಂದ ಕೆ.ಡಿ.ಎ ಉದ್ಯಾನವನ ಅಭಿವೃದ್ಧಿ ಮಾಡಲಾಗುವುದು ಎಂದರು, ವಿ.ಎಂ.ಡೋವಲಪರ್ಸ್ ವತಿಯಿಂದ ಸರ್ಕಾರದೊಂದಿಗೆ ಸೇರಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಕೈಜೋಡಿಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ನಮಗೆ ಒಪ್ಪಿಸಿದ ಕೆಲಸವನ್ನು ಮಾಡುತ್ತೇವೆ ಎಂದರು, ಒಲಿವಿಯ ರೆಸಾರ್ಟ್ ವತಿಯಿಂದ ಅಂಬೇಡ್ಕರ್ ಉದ್ಯಾನವನ ಅಭಿವೃದ್ಧಿ ಮಾಡುತ್ತೇವೆ ಎಂದರು, ಇನ್ನು ಅನೇಕ ಸಂಘ ಸಂಸ್ಥೆಗಳು ಮುಖಂಡರು ಜಿಲ್ಲಾಡಳಿತ ಮತ್ತು ನಗರಸಭೆ ಯೊಂದಿಗೆ ಅಭಿವೃದ್ಧಿಗೆ ಕೈ ಜೋಡಿಸುತ್ತೇವೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ, ನಗರಸಭೆ ಆಯುಕ್ತರಾದ ನವೀನ್ ಚಂದ್ರ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಅಂಬಿಕಾ, ಎಇಇ ಶ್ರೀನಿವಾಸ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಜೋಶಿ, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತರಾದ ಕೆವಿ.ಶಂಕರಪ್ಪ, ನಗರಸಭೆ ಮಂಜುನಾಥ್, ರೋಟರಿ ರಮೇಶ್, ಹೋಟಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾಗರಾಜ್, ರೇಡ್ ಕ್ರಾಸ್ ಸಂಸ್ಥೆಯ ಗೋಪಾಲ ಕೃಷ್ಣ, ಸೇರಿದಂತೆ ಸಂಘ ಸಂಸ್ಥೆಗಳ ಮುಖ್ಯಸ್ಥರು, ಉದ್ದಿಮೆದಾರರು, ಕಂಪನಿ ಮಾಲೀಕರು, ಬ್ಯಾಂಕುಗಳ ವ್ಯಾವಸ್ಥಪಕರು, ವ್ಯಾಪರಸ್ಥರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಕೋಲಾರ ನಗರದ ಸಮಗ್ರ ಸೌಂದರೀಕರಣದ ಬಗ್ಗೆ ವಿವಿಧ ಸಂಘ ಸಂಸ್ಥೆಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande