
ಕಾರವಾರ, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ತೀವ್ರಗೊಂಡಿರುವ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೇವಾಲಯಗಳ ಭೇಟಿ ಮುಂದುವರೆದಿದೆ.
ಇಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಆಂದ್ಲೆಯ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ಪೂಜಾ ಕೈಂಕರ್ಯಗಳನ್ನು ಏಕಾಂತದಲ್ಲಿ ನೆರವೇರಿಸಿದರು.
ಆಂದ್ಲೆಗೆ ತೆರಳುವ ಮುನ್ನ ಡಿ.ಕೆ.ಶಿವಕುಮಾರ್ ಅವರು ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆತ್ಮಲಿಂಗ ದರ್ಶನ, ಬಿಲ್ವಪತ್ರೆ ಅರ್ಪಣೆ, ಪಂಚಾಮೃತ ಅಭಿಷೇಕ ಹಾಗೂ ಮಹಾಗಣಪತಿ ಪೂಜೆ ನೆರವೇರಿಸಿದರು. ನಂತರ ಶಲ್ಯ ಧರಿಸಿ, ರುದ್ರಾಕ್ಷಿ ತೊಟ್ಟು ಮಡಿಯಲ್ಲಿ ಆಂದ್ಲೆ ದೇವಾಲಯಕ್ಕೆ ಆಗಮಿಸಿದರು,
ಪೂಜಾ ವಿಧಿಗಳ ವೇಳೆ ಗರ್ಭಗುಡಿಯಲ್ಲಿ ಸಂಪೂರ್ಣ ಏಕಾಂತಕ್ಕೆ ಒತ್ತು ನೀಡಿದ ಡಿ.ಕೆ.ಶಿವಕುಮಾರ್, ಸಚಿವ ಮಂಕಾಳು ವೈದ್ಯ ಹಾಗೂ ಶಾಸಕ ಸತೀಶ್ ಸೈಲ್ ಅವರನ್ನು ಹೊರಗೆ ಕಳುಹಿಸಿ, ಅರ್ಚಕ ಗಣೇಶ್ ನಾಯ್ಕ ಅವರಿಂದ ಮಾತ್ರ ಪೂಜಾ ಕಾರ್ಯ ನೆರವೇರಿಸಿದರು. ಗರ್ಭಗುಡಿಯಲ್ಲಿ ಡಿಕೆಶಿ ಹೊರತುಪಡಿಸಿ ಇತರರಿಗೆ ಪ್ರವೇಶ ನೀಡಲಾಗಲಿಲ್ಲ.
ಆಂದ್ಲೆ ಜಗದೀಶ್ವರಿ ದೇವಸ್ಥಾನದಲ್ಲಿ ಕಳೆದ ಆರು ವರ್ಷಗಳಿಂದ ಪ್ರತಿ ಅಮಾವಾಸ್ಯೆಯಂದು ಡಿ.ಕೆ.ಶಿವಕುಮಾರ್ ಅವರ ಹೆಸರಿನಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ತಮ್ಮ ಪ್ರತಿಯೊಂದು ರಾಜಕೀಯ ನಿರ್ಧಾರಕ್ಕೂ ದೇವಿಯ ಆಶೀರ್ವಾದ ಬೇಡುವ ನಂಬಿಕೆಯನ್ನು ಡಿಕೆಶಿ ಹೊಂದಿದ್ದಾರೆ ಎಂದು ಶಿವಕುಮಾರ್ ಆಪ್ತ ವಲಯ ಮಾಹಿತಿ ನೀಡಿದೆ.
2019ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 50 ದಿನಗಳ ಜೈಲುವಾಸ ಅನುಭವಿಸಿದ್ದ ಸಂದರ್ಭದಲ್ಲಿ, ಡಿಕೆಶಿ ಅವರ ತಾಯಿ ಮತ್ತು ಪತ್ನಿ ಈ ದೇವಾಲಯಕ್ಕೆ ಭೇಟಿ ನೀಡಿ ಜಾಮೀನಿಗಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಆಗ ಅರ್ಚಕ ಗಣೇಶ್ ನಾಯ್ಕ ಅವರು “ಒಂಬತ್ತು ದಿನಗಳಲ್ಲಿ ಜಾಮೀನು ಸಿಗಲಿದೆ” ಎಂದು ಹೇಳಿದ್ದರೆನ್ನಲಾಗಿದ್ದು, ಅದರಂತೆ ಒಂಬತ್ತು ದಿನಗಳೊಳಗೆ ನ್ಯಾಯಾಲಯದಿಂದ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ಮಂಜೂರಾಗಿತ್ತು ಎಂಬುದು ಸ್ಥಳೀಯರು ಮಾಹಿತಿ ಹಂಚಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa