
ಗದಗ, 18 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಭೌತಿಕ ಶ್ರೀಮಂತಿಕೆ ಹೆಚ್ಚುತ್ತಿರುವಂತೆಯೇ ಸಂಸ್ಕಾರ, ಸಂಸ್ಕೃತಿ, ಆಚಾರ–ವಿಚಾರ, ಸಂಪ್ರದಾಯ ಹಾಗೂ ಮಾನವೀಯ ಮೌಲ್ಯಗಳು ನಿಧಾನವಾಗಿ ಕ್ಷೀಣಿಸುತ್ತಿರುವುದು ಗಂಭೀರ ಚಿಂತನೆಯ ವಿಷಯವಾಗಿದೆ ಎಂದು ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಶ್ರೀ ಶಂಕರಭಾರತಿ ಸಮುದಾಯ ಭವನದಲ್ಲಿ ತಾಲೂಕಾ ದೈವಜ್ಞ ಬ್ರಾಹ್ಮಣ ಸಮಾಜ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡ ‘ದೈವಜ್ಞ ದರ್ಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ಹಿಂದಿನ ದಿನಗಳಲ್ಲಿ ಬಡತನ ಹಾಗೂ ಕಷ್ಟಸಂಕಷ್ಟಗಳ ನಡುವೆಯೂ ನಮ್ಮ ಹಿರಿಯರು ಸಂಸ್ಕೃತಿ, ಸಂಪ್ರದಾಯ, ಆಚಾರ–ವಿಚಾರಗಳೊಂದಿಗೆ ಬದುಕುತ್ತಾ ಶಾಂತಿ ಮತ್ತು ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಆ ಮೌಲ್ಯಪೂರ್ಣ ಬದುಕಿಗಾಗಿ ಹಂಬಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವೈಯಕ್ತಿಕ ಜೀವನಕ್ಕೆ ಮಾತ್ರ ಸೀಮಿತವಾಗದೇ, ಸಮಾಜದ ಶ್ರೇಯೋಭಿವೃದ್ಧಿ ಹಾಗೂ ಧರ್ಮಕಾರ್ಯಗಳಿಗೆ ಕೈಜೋಡಿಸಬೇಕು. ರಾಜ್ಯಾದ್ಯಂತ ನಡೆಯುತ್ತಿರುವ ‘ದೈವಜ್ಞ ದರ್ಶನ’ ಕಾರ್ಯಕ್ರಮದ ಮೂಲಕ ಸಮಾಜದ ಸಂಘಟನೆ ಬಲಪಡಿಸುವುದರ ಜೊತೆಗೆ, ಶ್ರೀಮಠದ ಉತ್ತರಾಧಿಕಾರಿಯಾದ ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿಯವರ ಪರಿಚಯವನ್ನು ಸಮಾಜ ಬಾಂಧವರಲ್ಲಿ ಮೂಡಿಸುವ ಕಾರ್ಯ ನಡೆಯಬೇಕು ಎಂದು ಸ್ವಾಮೀಜಿ ಹೇಳಿದರು.
ಕಾರ್ಯಕ್ರಮದಲ್ಲಿ ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಭಕ್ತಿಯಿಂದ ಭಗವಂತನ ಆರಾಧನೆ, ಸ್ಮರಣೆ ಹಾಗೂ ಧ್ಯಾನ ಮಾಡಿದರೆ ಸಾಕು, ಭಗವಂತ ಎಲ್ಲರಿಗೂ ಒಲಿಯುತ್ತಾನೆ. ಆದರೆ ಇನ್ನೊಬ್ಬರನ್ನು ವಂಚಿಸಿ ಅಥವಾ ಅನ್ಯಾಯದಿಂದ ಗಳಿಸಿದ ಹಣವನ್ನು ದೇವರಿಗೆ ಅರ್ಪಿಸಿದರೆ ದೇವರು ಒಲಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಸಮಾಜದ ಪ್ರತಿಯೊಂದು ಕುಟುಂಬದಲ್ಲಿಯೂ ಮಕ್ಕಳು ಸಂಸ್ಕಾರವಂತರಾಗಿ ಬೆಳೆಬೇಕು. ಕೇವಲ ಹೆಸರು ಅಥವಾ ಪದವಿಗಳಿಂದ ಶ್ರೇಷ್ಠನಾಗುವುದರಿಂದ ಸಾಲದು, ನಮ್ಮ ಕರ್ತವ್ಯ, ವಿಚಾರಧಾರೆ ಮತ್ತು ಮನಸ್ಥಿತಿಯಲ್ಲಿಯೂ ಶ್ರೇಷ್ಠರಾಗಬೇಕು ಎಂದು ಅವರು ಬೋಧಿಸಿದರು.
ಲಕ್ಷ್ಮೇಶ್ವರ ಭಾಗದಲ್ಲಿ ದೈವಜ್ಞ ಸಮಾಜ ಬಾಂಧವರು ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒಗ್ಗಟ್ಟಿನಿಂದ, ಅಚ್ಚುಕಟ್ಟಾಗಿ ಸಹಕಾರ ನೀಡುತ್ತಿರುವುದು ಉತ್ತಮ ಹಾಗೂ ಶ್ಲಾಘನೀಯ ಬೆಳವಣಿಗೆ ಎಂದು ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು. ನಾವು ಸಂಸ್ಕಾರದಿಂದ ದೂರವಾಗುತ್ತಿರುವ ಸ್ಥಿತಿಯನ್ನು ಆತ್ಮಪರಿಶೀಲನೆ ಮೂಲಕ ಸರಿಪಡಿಸಿಕೊಳ್ಳಬೇಕಿದೆ ಎಂದು ಅವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ವೇರ್ಣೆಕರ ವಹಿಸಿದ್ದರು. ಈ ಸಂದರ್ಭದಲ್ಲಿ ಹನುಮಂತ ಪುತಳೀಕರ, ಮಂಗಳೂರಿನ ಗಜೇಂದ್ರ ಶೇಠ, ಮಾರುತಿ ವೇರ್ಣೆಕರ, ವೆಂಕಟೇಶ ರಾಯಕರ, ರವಿರಾಜ ವೇರ್ಣೆಕರ, ಕೆ. ಸುಧಾಕರ ಶೇಟ್, ರಾಜ್ಯ ಆಯುಷ್ ಇಲಾಖೆ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ರಾಜು ಶೇಟ್, ಅರುಣ ವೇರ್ಣೆಕರ, ಗಣೇಶ ಕುರಡೇಕರ, ಮೋಹನ ವೇರ್ಣೆಕರ, ಸುರೇಶ ವೇರ್ಣೆಕರ, ಚಂದ್ರಕಾಂತ ಶೇಟ್, ಈಶ್ವರ ಪುಥಳಿಕರ, ನಾರಾಯಣ, ರಾಘವೇಂದ್ರ ಶೇಟ್, ವಾದಿರಾಜ ಶೇಟ್, ಮೋಹನ್ ಕುರುಡೇಕರ, ಸುರೇಶ ಕುರುಡೇಕರ, ವೆಂಕಟೇಶ ವೇರ್ಣೆಕರ, ಪ್ರಶಾಂತ ಕುಡಾಳಕರ, ಸುಜಾತಾ ಶೇಟ್, ವೆಂಕಟೇಶ ದೈವಜ್ಞ, ಪ್ರಕಾಶ ರೇವಣಕರ, ವಿಷ್ಣು ಕುರುಡೇಕರ ಸೇರಿದಂತೆ ಅನೇಕ ಗಣ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರೇಮ ಶೇಟ್ ವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP