ಹೆಣ್ಣು ಭ್ರೂಣ ಹತ್ಯೆತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ : ದಿನೇಶ್ ಗುಂಡೂರಾವ್
ಬೆಳಗಾವಿ, 16 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹೆಣ್ಣು ಭ್ರೂಣ ಹತ್ಯೆ ಒಂದು ಗಂಭೀರ ಸಾಮಾಜಿಕ ಪಿಡುಗಾಗಿದ್ದು, ಇದನ್ನು ತಡೆಗಟ್ಟಲು ಕೇವಲ ಕಾನೂನು ಕ್ರಮಗಳಷ್ಟೇ ಸಾಕಾಗುವುದಿಲ್ಲ; ಸಾಮಾಜಿಕ ಜಾಗೃತಿಯೂ ಅತೀ ಅಗತ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ
ಹೆಣ್ಣು ಭ್ರೂಣ ಹತ್ಯೆತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ : ದಿನೇಶ್ ಗುಂಡೂರಾವ್


ಬೆಳಗಾವಿ, 16 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹೆಣ್ಣು ಭ್ರೂಣ ಹತ್ಯೆ ಒಂದು ಗಂಭೀರ ಸಾಮಾಜಿಕ ಪಿಡುಗಾಗಿದ್ದು, ಇದನ್ನು ತಡೆಗಟ್ಟಲು ಕೇವಲ ಕಾನೂನು ಕ್ರಮಗಳಷ್ಟೇ ಸಾಕಾಗುವುದಿಲ್ಲ; ಸಾಮಾಜಿಕ ಜಾಗೃತಿಯೂ ಅತೀ ಅಗತ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರ ಎಷ್ಟೇ ಬಿಗಿಯಾದ ಕಾನೂನು ಕ್ರಮಗಳನ್ನು ಕೈಗೊಂಡರೂ ಕೆಲವೊಂದು ಪ್ರಕರಣಗಳು ನಡೆಯುತ್ತಿವೆ. ಆದರೆ ಒಟ್ಟಾರೆ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ತಂತ್ರಜ್ಞಾನ ದುರುಪಯೋಗವೂ ಹೆಚ್ಚಾಗಿದೆ. ಓರಲ್ ಔಷಧ ಸೇವನೆಯ ಮೂಲಕವೂ ಹಾಗೂ ಪೋರ್ಟೆಬಲ್ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಗಳ ಬಳಕೆಯಿಂದಲೂ ಭ್ರೂಣ ಲಿಂಗ ಪತ್ತೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ, ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯ ಡೇಟಾವನ್ನು ಪರಿಶೀಲಿಸಿ, ಗಂಡುಮಕ್ಕಳ ಜನನ ಪ್ರಮಾಣ ಅಸಹಜವಾಗಿ ಹೆಚ್ಚಿರುವ ಆಸ್ಪತ್ರೆಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ. ಭ್ರೂಣ ಲಿಂಗ ಪತ್ತೆ ಅಥವಾ ಹತ್ಯೆ ಬಗ್ಗೆ ಮಾಹಿತಿ ನೀಡುವವರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಟ್ಟು, ರಾಜ್ಯ ಸರ್ಕಾರದಿಂದ ₹1 ಲಕ್ಷ ಬಹುಮಾನ ನೀಡಲಾಗುತ್ತಿದೆ. ಪ್ರತಿ ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಅಗತ್ಯವಿದ್ದಲ್ಲಿ ಗುಪ್ತ ಕಾರ್ಯಾಚರಣೆಗಳನ್ನೂ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಇತ್ತೀಚೆಗೆ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ನಡೆಸಿದ್ದ ಆರೋಪದ ಮೇಲೆ ವೈದ್ಯ ಡಾ. ಶಶಿ ಎಸ್.ಎಲ್. ಅವರನ್ನು ಸೇವೆಯಿಂದ ಅಮಾನತು ಮಾಡಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಅಲ್ಲದೆ, ‘ಬಾಲಿಕಾ’ ಆನ್‌ಲೈನ್ ಸಾಫ್ಟ್‌ವೇರ್ ಮೂಲಕ ಸ್ಕ್ಯಾನಿಂಗ್ ಸೆಂಟರ್‌ಗಳ ಕಡ್ಡಾಯ ನೋಂದಣಿ ಹಾಗೂ ನವೀಕರಣ ಮಾಡಲಾಗುತ್ತಿದೆ. ಅಲ್ಟ್ರಾಸೌಂಡ್ ಯಂತ್ರಗಳ ತಯಾರಕರು ಮತ್ತು ಮಾರಾಟಗಾರರನ್ನು ರಾಜ್ಯಮಟ್ಟದಲ್ಲಿ ನೋಂದಣಿ ಮಾಡಿ, ತ್ರೈಮಾಸಿಕ ವರದಿ ಪಡೆಯಲಾಗುತ್ತಿದೆ ಎಂದು ವಿವರಿಸಿದರು.

ಆರೋಗ್ಯ ಇಲಾಖೆ ಎಲ್ಲ ಮಟ್ಟದಲ್ಲೂ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಹೆಣ್ಣು ಭ್ರೂಣ ಹತ್ಯೆ ತಡೆಗೆ ಬದ್ಧವಾಗಿದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande