
ಕೋಲಾರ, ೧೬ ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಡಿ ಇದೇ ಡಿ.೨೧ ರಿಂದ ೨೪ ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಪ್ರತಿಯೊಬ್ಬರು ಮಕ್ಕಳಿಗೆ ಲಸಿಕೆಯನ್ನು ಹಾಕಿಸಬೇಕು ಮತ್ತು ಶೇಕಡ ನೂರಕ್ಕೆ ನೂರರಷ್ಟು ಪೂರ್ಣ ಪ್ರಮಾಣದ ಸಾಧನೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಜಿ.ಶ್ರೀನಿವಾಸ್ ತಿಳಿಸಿದರು.
ಕೋಲಾರ ನಗರದಲ್ಲಿ ಆಯೋಜಿಸಿದ್ದ, ಪತ್ರಿಕಾ ಗೋಷ್ಠಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಪೂರ್ವ ಸಿದ್ಧತಾ ಕುರಿತು ಮಾತನಾಡಿದರು.
ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು ೧೯೯೭ರಲ್ಲಿ ಪ್ರಾರಂಭವಾದ ಪಲ್ಸ್ ಪೋಲಿಯೋ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ. ಪೋಲಿಯೋ ಲಸಿಕೆ ಹಾಕುವ ಅಭಿಯಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪೋಲಿಯೋ ದಿಂದ ಉಂಟಾಗುವ ಅಂಗವಿಕಲತೆಯೊಂದಿಗೆ ಭೀಕರ ಪರಿಣಾಮಗಳನ್ನು ಬೀರಬಹುದಾದ ಈ ರೋಗವನ್ನು ತಡೆಗಟ್ಟಲು ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ಹಾಕಿಸಬೇಕು ಎಂದರು.
ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿನ ೦-೫ ವರ್ಷದೊಳಗಿನ ಯಾವುದೇ ಮಗು ಲಸಿಕೆ ಸೌಲಭ್ಯದಿಂದ ಹೊರಗುಳಿಯಬಾರದು. ಬೂತ್ಗಳಲ್ಲಿ ಡಿ.೨೧ ಭಾನುವಾರ ದಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೫ ಗಂಟೆವರೆಗೂ ಪೋಲಿಯೋ ಲಸಿಕೆಯನ್ನು ಹಾಕಲಾಗುತ್ತದೆ ಮತ್ತು ಡಿ.೨೨, ೨೩, ೨೪ ರಂದು ಮೂರು ದಿನಗಳ ಕಾಲ ಪ್ರತಿ ಮನೆ ಮನೆಗೆ ಭೇಟಿ ನೀಡಿ ಲಸಿಕೆಯನ್ನು ಹಾಕಲಾಗುತ್ತದೆ. ಆದ್ದರಿಂದ ಯಾವ ಮಗುವು ಸಹ ತಪ್ಪಿಸಿಕೊಳ್ಳದೇ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದರು.
ರಾಜ್ಯಗಳಿಂದ ಉದ್ಯೋಗ ಹರಸಿ ಬಂದಂತಹ ಕಾರ್ಮಿಕ ಕುಟುಂಬ ಮಕ್ಕಳನ್ನೂ ಗುರುತಿಸಿ ಹಾಕಲಾಗುತ್ತದೆ. ಜಿಲ್ಲೆಯಲ್ಲಿ ೦-೫ ವರ್ಷದ ಒಟ್ಟು ೧,೬೩,೫೦೮ ಮಕ್ಕಳಿದ್ದು, ೭೩೮ ಬೂತ್ಗಳನ್ನು ಗುರುತಿಸಿದ್ದು, ೩೭ ತಂಡಗಳನ್ನು ರಚಿಸಲಾಗಿದೆ. ೩೦೬೪ ಲಸಿಕೆದಾರರನ್ನು ನೇಮಿಸದ್ದು ಮತ್ತು ೧೬೪ ಮೇಲ್ವಿಚಾರಕರನ್ನು ಗುರುತಿಸಿದ್ದು, ಪ್ರತಿಯೊಬ್ಬರಿಗೂ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸುವುದಾಗಿ ತಿಳಿಸಿದರು.
ಈಗಾಗಲೇ ನಗರಸಭೆ ಮತ್ತು ಇನ್ನಿತರೆ ಸ್ಥಳೀಯ ಸಂಸ್ಥೆಗಳ ವತಿಯಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಆಡಿಯೋ ಮೂಲಕ ಕಸ ವಿಲೇವಾರಿ ವಾಹನಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಲಸಿಕೆ ನೀಡುವ ಗುರಿಯು ಇನ್ನೂ ಹೆಚ್ಚಾಗುವ ಸಂಭವವಿದ್ದು, ಇವರೆಲ್ಲರಿಗೂ ಲಸಿಕೆಯನ್ನು ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನಸಿಂಗ್ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯಾದ್ಯಂತ ತಾಲ್ಲೂಕು ನೋಡಲ್ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕರ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನಗರಾಭಿವೃದ್ಧಿ ಇಲಾಖೆ, ನಗರಸಭೆ, ಪುರಸಭೆ ಮತ್ತು ಸ್ವಯಂ ಸಂಘಗಳು ಹಾಗೂ ಇತರೆ ಇಲಾಖೆಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್.ಸಿ.ಹೆಚ್. ಮತ್ತು ರಾಷ್ಟ್ರೀಯ ಪಲ್ಸ್ ಪೋಲಿಯೋ ಜಿಲ್ಲಾ ನೋಡಲ್ ಅಧಿಕಾರಿ ಡಾ.ಚಾರಿಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ನಗರದಲ್ಲಿ ಆಯೋಜಿಸಿದ್ದ, ಪತ್ರಿಕಾ ಗೋಷ್ಠಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಪೂರ್ವ ಸಿದ್ಧತಾ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಜಿ.ಶ್ರೀನಿವಾಸ್ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್