
ಕೋಲಾರ, ೧೬ ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಶ್ರೀನಿವಾಸಪುರ ಪಟ್ಟಣದ ಹಲವು ವರ್ಷಗಳ ಜ್ವಲಂತ ಸಮಸ್ಯೆಯಾಗಿರುವ ರಾಜಕಾಲುವೆ ಒತ್ತುವರಿ ಹಾಗೂ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ರವಿ ರವರು ಮಂಗಳವಾರ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶ್ರೀನಿವಾಸಪುರ ಪಟ್ಟಣದ ಎಸ್ಎಫ್ ಶಾಲೆ ಮುಂಭಾಗವಿರುವ ರಾಜಕಾಲುವೆ, ರೈಲ್ವೆ ಅಂಡರ್ ಪಾಸ್ ಹಾಗೂ ಕಟ್ಟೆ ಕೆಳಗಿನ ಪಾಳ್ಯದ ರಸ್ತೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ರಾಜಕಾಲುವೆ ಒತ್ತುವರಿಯಿಂದಾಗಿ ಮಳೆಗಾಲದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳನ್ನು ಗಮನಿಸಿದ ಅವರು, ತಕ್ಷಣವೇ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಲು ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾರ್ವಜನಿಕರ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಯಾರೇ ಪ್ರಭಾವಿಗಳಿದ್ದರೂ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿ, ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿ. ಕೇವಲ ರಾಜಕಾಲುವೆ ಮಾತ್ರವಲ್ಲದೆ, ಪಟ್ಟಣದ ಪ್ರಮುಖ ರಸ್ತೆಗಳ ಗುಂಡಿ ಬಿದ್ದಿರುವ ಸ್ಥಿತಿ ಮತ್ತು ಸಂಚಾರ ದಟ್ಟಣೆಯ ಬಗ್ಗೆಯೂ ಜಿಲ್ಲಾಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.
ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಎಚ್ಚರಿಸಿದರು.
ರೈಲ್ವೆ ಅಂಡರ್ ಪಾಸ್ ಬಳಿ ನೀರು ನಿಲ್ಲುವ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ತಾಂತ್ರಿಕ ವರದಿ ಸಲ್ಲಿಸುವಂತೆ ಎಂಜಿನಿಯರ್ಗಳಿಗೆ ಸೂಚಿಸಿದರು.
ಈ ಪರಿಶೀಲನಾ ಕಾರ್ಯದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು , ಪುರಸಭೆಯ ಮುಖ್ಯಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ಜಿಲ್ಲಾಧಿಕಾರಿಗಳ ದಿಢೀರ್ ಭೇಟಿಯಿಂದ ಪಟ್ಟಣದ ನಾಗರಿಕರಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಹೊಸ ಭರವಸೆ ಮೂಡಿದೆ. ಎಸ್ಎಫ್ ಶಾಲೆ ಮುಂಭಾಗದ ರಾಜಕಾಲುವೆ ವೀಕ್ಷಣೆ,ರೈಲ್ವೆ ಅಂಡರ್ ಪಾಸ್ ಬಳಿಯ ಅವ್ಯವಸ್ಥೆ ಸರಿಪಡಿಸಲು ಸೂಚನೆ, ಕಟ್ಟೆ ಕೆಳಗಿನ ಪಾಳ್ಯದ ರಸ್ತೆ ಸಮಸ್ಯೆಗಳ ಪರಿಶೀಲನೆ,ಒತ್ತುವರಿ ತೆರವಿಗೆ ತಾಲೂಕು ದಂಡಾಧಿಕಾರಿಗಳಿಗೆ ಗಡುವು ನಿಡ್ಡಾರೆಂದು ತಿಳಿದು ಬಂದಿದೆ.
ಚಿತ್ರ ; ಶ್ರೀನಿವಾಸಪುರ ಪಟ್ಟಣದ ಎಸ್ಎಫ್ ಶಾಲೆ ಮುಂಭಾಗವಿರುವ ರಾಜಕಾಲುವೆ, ರೈಲ್ವೆ ಅಂಡರ್ ಪಾಸ್ ಹಾಗೂ ಕಟ್ಟೆ ಕೆಳಗಿನ ಪಾಳ್ಯದ ರಸ್ತೆಗಳಿಗೆ ಜಿಲ್ಲಾಧಿಕಾರಿ ರವಿ ರವರು ಭೇಟಿ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್