
ವಿಜಯಪುರ, 16 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೆಶಕರಾದ ಮಹೇಶ ಪೋತದಾರ ಅವರು ಅಧಿಕಾರುಗಳಿಗೆ ಸೂಚಿಸಿದರು.
ನಗರದ ಸಾವಿತ್ರಿಬಾಯಿ ಫುಲೆ ಬಾಲಕಿಯರ ವಸತಿ ನಿಲಯದಲ್ಲಿ ಆಯೋಜಿಸಿದ್ದ ನೂತನವಾಗಿ ಪರಿಚಯಿಸಲಾದ ನಿಲಯ ಪೋರ್ಟಲ್ ಅನುಷ್ಠಾನ ತರಬೇತಿ ಕಾರ್ಯಾಗಾರ ಹಾಗೂ ಸಿಬ್ಬಂದಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಅವರು ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಫಲಿತಾಂಶ ಸುಧಾರಣೆಯನ್ನು ಸಾಧಿಸಲು ವಿಶೇಷ ನೀಲನಕ್ಷೆ ತಯಾರಿಸಿ, ನೀಡಿರುವ ನಿರ್ದೇಶನ ಹಾಗೂ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಕ್ರಮ ಕೈಗೊಳ್ಳಲು ಅವರು ಸೂಚನೆ ನೀಡಿದರು.
ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಾದ ಬಯೋಮೆಟ್ರಿಕ್ ಹಾಜರಾತಿ, ಆಹಾರ ತಯಾರಿಕೆ ಹಾಗೂ ಹಂಚಿಕೆಯಲ್ಲಿ ಪಾರದರ್ಶಕತೆ ಕುರಿತ ಪೋಟೋಗಳನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವುದು, ವಸತಿ ನಿಲಯಗಳ ಮೆಂಟರಗಳ ಭೇಟಿ, ವಸತಿ ನಿಲಯ ವಾಸ್ತವ್ಯ ಹಾಗೂ ಸ್ವಚ್ಛತಾ ಕಾರ್ಯಕ್ರಮ, ಮಿಷನ್ ವಿದ್ಯಾಪುರ ಆನ್-ಲೈನ್ ತರಗತಿ ಹಾಗೂ ವಾರ್ಡನ್ ಗಳ ವಿಶೇಷ ದಿನಚರಿ, ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಊಟ, ಮೂಲಭೂತ ಸೌಕರ್ಯ, ಶಿಷ್ಯವೇತನ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಲು ಅವರು ಸೂಚನೆ ನೀಡಿದ ಅವರು, ಅಧಿಕಾರಿ- ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ ತೋರಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಈಗಾಗಲೇ ವಸತಿ ನಿಲಯ ವಾಸ್ತವ್ಯ ಹಾಗೂ ಸ್ವಚ್ಛತಾ ಕಾರ್ಯಕ್ರಮವು ರಾಜ್ಯದಲ್ಲಿಯೇ ಮಾದರಿಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳ ಆತ್ಮವಿಶ್ವಾಸ ತುಂಬಲು ವಸತಿ ಶಾಲೆಗಳಿಗೆ ಮೆಂಟರ್ ಗಳ ಭೇಟಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ವಸತಿ ನಿಲಯ ಸುಗಮ ನಿರ್ವಹಣೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಇಲಾಖೆಯ ಅಧಿಕಾರಿಗಳು ಹಗಲಿರಳು ಶ್ರಮಿಸುವಂತೆ ಅವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿರುವ ನಿಲಯ ಪಾಲಕರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು. ನಿಲಯ ಪೋರ್ಟಲ್ ಅನುಷ್ಠಾನ ಕುರಿತು ತರಬೇತಿ ನೀಡಲಾಯಿತು.
ಸಭೆಯಲ್ಲಿ ತಾಂತ್ರಿಕ ವ್ಯವಸ್ಥಾಪಕರಾದ ಟಿ.ವ್ಹಿ.ಮಂಟೂರ, ಸಹಾಯಕ ನಿರ್ದೇಶಕರಾದ ಉಮೇಶ ಲಮಾಣಿ, ಭವಾನಿ ಪಾಟೀಲ, ಮಂಜು ಹಿರೇಮನಿ, ಕಚೇರಿ ಅಧೀಕ್ಷರಾದ ಚನ್ನಗಿರಿ ಚೌಧರಿ ಹಾಗೂ ನಿಲಯಪಾಲಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande