
ಕೋಲಾರ, ೧೫ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ಎರಡನೇ ಭಾರಿ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೇಸ್ ಪಕ್ಷದಲ್ಲಿದ್ದರೂ ಸಹ ಸಮುದಾಯಕ್ಕೆ ಹೆಚ್ಚಿನ ಅದ್ಯತೆ ನೀಡುತ್ತಿದ್ದರು. ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಸೇವಾ ಕಾಳಜಿಯನ್ನು ಹೊಂದಿದ್ದರು. ಯಾವೂದೇ ಸಮಸ್ಯೆಗಳಿಗೂ ಎದೆಗುಂದುತ್ತಿರಲಿಲ್ಲ ಎಲ್ಲವನ್ನು ಎದುರಿಸುವಂತ ಗಟ್ಟಿತನ ಅವರಲ್ಲಿತ್ತು ಇಂಥ ದೀಮಂತ ನಾಯಕನನ್ನು ಕಳೆದುಕೊಂಡ ಸಮಾಜವು ತಬ್ಬಲಿಯಾಗಿದೆ ಎಂದು ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ನಾಗಲಾಪುರ ಸಿದ್ದಲಿಂಗ ಒಡೆಯರ್ ಸಂತಾಪ ವ್ಯಕ್ತಪಡಿಸಿದರು.
ನಗರದ ಅರಳೇ ಪೇಟೆಯ ಶ್ರೀ ಬಸವೇಶ್ವರ ದೇವಾಲಯದ ಅವರಣದಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರ ಸ್ಥಾನವನ್ನು ಅವರ ಕುಟುಂಬದವರು ವಹಿಸಿಕೊಂಡು ಮುಂದಿನ ದಿನದಲ್ಲಿ ವೀರಶೈವ ಲಿಂಗಾಯಿತ ಸಮಾಜವನ್ನು ಮುನ್ನಡೆಸುವಂತಾಗಬೇಕೆ0ದು ಕೋರಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಕೆ.ಬಿ.ಬೈಲಪ್ಪ ಮಾತನಾಡಿ, ಶಾಮನೂರು ಶಿವಶಂಕರಪ್ಪನವರು ಎಷ್ಟೆ ದೊಡ್ಡ ಸ್ಥಾನವನ್ನು ಅಲಂಕರಿಸಿದ್ದರೂ ಸಮುದಾಯದ ಆಚಾರ ವಿಚಾರಗಳು. ಬಸವಣ್ಣನವರ ವಿಚಾರಧಾರೆಗಳು ತತ್ವಗಳು ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ನಿಜಶರಣರಾಗಿ ಸಮಾಜಕ್ಕೆ ಆದರ್ಶವಾಗಿದ್ದರು. ಕೊಡುಗೈ ದಾನಿಗಳಾಗಿದ್ದರು ಅವರ ವ್ಯಕ್ತಿತ್ವವನ್ನು ಮಾದರಿಯನ್ನಾಗಿಸಿಕೊಂಡು ಅವರು ತೋರಿರುವ ಹಾದಿಯಲ್ಲಿ ಜೀವನದಲ್ಲಿ ಸಾಗುವಂತೆ ಅದಾಗ ಮಾತ್ರ ಜೀವನವು ಅರ್ಥಪೂರ್ಣವಾಗುವುದು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಸುರೇಶ್ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಲಿಂಗೈಕ್ಯರಾಗಿರುವುದು ವೀರ ಶೈವ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಅಘಾದ ನಷ್ಟವುಂಟಾಗಿದೆ ಇವರು ದೊಡ್ಡ ಉದ್ಯಮಿಗಳಾಗಿ ಸಾವಿರಾರು ಮಂದಿಗೆ ಅನ್ನದಾತರಾಗಿದ್ದಾರೆ. ಲಕ್ಷಾಂತರ ಮಂದಿಗೆ ವಿದ್ಯಾದಾತರು, ಆಶ್ರಯದಾತರಾಗಿ ದಾವಣಗೆರೆಯ ಧಣಿಗಳಾಗಿದ್ದರು. ಅವರಿಗೆ ೯೫ ವರ್ಷಗಳಾಗಿದ್ದರೂ ಅಭಿವೃದ್ದಿ ಮತ್ತು ಸಮಾಜ ಸೇವೆಯಲ್ಲಿ ಯಾವ ಯುವಕರಿಗೂ ಕಡಿಮೆ ಇಲ್ಲದಂತ ಕಾಳಜಿಯಿತ್ತು. ಅವರಿಗೆ ರಾಜಕಾರಣ ಎಂಬುವುದು ಬೇಕಾಗಿರಲಿಲ್ಲ ಆದರೆ ರಾಜಕೀಯಕ್ಕೆ ಶಾಮನೂರು ಶಿವಶಂಕರಪ್ಪ ಅವರ ಅಗತ್ಯವಿತ್ತು ಎಂದು ಹೇಳಿದರು.
ಜಂಗಮ ಬಸಾಪುರ ಶಿವಕುಮಾರ್ ಮಾತನಾಡಿ, ಶಾಮನೂರು ಅವರು ನಮ್ಮ ಸಮಾಜದ ಆಸ್ತಿಯಾಗಿದ್ದರು ಅವರು ವಿಧಿವಶರಾಗಿರುವುದು ಸಮುದಾಯಕ್ಕೆ ಅಘಾತ ನೋವುಂಟಾಗಿದೆ. ಸಮಾಜಕ್ಕೆ ಸಮುದಾಯಕ್ಕೆ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆಗಳು ಅಪಾರವಾಗಿದೆ ಇಂಥವರನ್ನು ಕಳೆದುಕೊಂಡು ವೀರಶೈವ ಲಿಂಗಾಯಿತ ಸಮುದಾಯ ಅನಾಥವಾಗಿದೆ ಎಂದರು.
ಶಾಮನೂರು ಅವರು ಲಿಂಗೈಕ್ಯರಾಗಿ ನಮ್ಮಿಂದ ದೈಹಿಕವಾಗಿ ದೂರವಾದರೂ ಮಾನಸಿಕವಾಗಿ ಎಲ್ಲರ ಮನದಲ್ಲಿ ಚಿರಾಯುವಾಗಿ ಉಳಿದಿದ್ದಾರೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಯೋಣಾ ಎಂದು ತಿಳಿಸಿದರು.
ಶ್ರದ್ದಾಂಜಲಿ ಸಭೆಯಲ್ಲಿ ಮಹಾಸಭಾ ತಾಲ್ಲೂಕು ಉಪಾಧ್ಯಕ್ಷೆ ಶಾಂತಮ್ಮ ಶಿವಕುಮಾರ್, ಲಿಂಗರಾಜು, ಈರೇಗೌಡರು, ವೇಮಗಲ್ ನಟರಾಜ್, ವೇಮಗಲ್ ನರಸಾಪುರ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ರಾಮಸಂದ್ರ ಕುಮಾರ್, ನಂಜಪ್ಪ, ಸಿಂಗೇಹಳ್ಳಿ ನಟರಾಜ್, ಬೆಳಮಾರನಹಳ್ಳಿ ವೀರೇಂದ್ರ ಪಟೇಲ್, ಶಾಪೂರು ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣಗೌಡರು, ನಿವೃತ್ತ ಎ.ಎಸ್.ಐ. ಬಸವರಾಜ್, ಎಸ್. ಸಚ್ಚಿದಾನಂದ, ಕೆ.ಬಿ.ಜಗದೀಶ್, ಆರ್ಚಕರಾದ ಯಡಿಯೂರಪ್ಪ ಸ್ವಾಮಿ ಮುಂತಾದವರು ಇದ್ದರು.
ಚಿತ್ರ : ದಾವಣಗೆರೆ ವೀರಶೈವ ಸಮುದಾಯದ ಮುಖಂಡ ಶ್ಯಾಮನೂರು ಶಿವಶಂಕರಪ್ಪನವರಿಗೆ ಕೋಲಾರದಲ್ಲಿ ವೀರಶೈವ ಸಮುದಾಯದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್