
ಗದಗ, 15 ಡಿಸೆಂಬರ್ (ಹಿ.ಸ.):
ಆ್ಯಂಕರ್ : ಗದಗ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಜಿಲ್ಲಾಡಳಿತ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಅಧಿಕೃತ ಇ-ಮೇಲ್‌ಗೆ ಐದು ಬಾಂಬ್‌ಗಳಿಂದ ಸ್ಫೋಟ ನಡೆಸುವುದಾಗಿ ಬೆದರಿಕೆ ಸಂದೇಶ ಬಂದಿದೆ. ಅರ್ನಾ ಅಶ್ವಿನ್ ಶೇಖರ್ ಹೆಸರಿನಿಂದ ಈ ಇ-ಮೇಲ್ ಕಳುಹಿಸಲಾಗಿದೆ ಎನ್ನಲಾಗಿದೆ.
ಇ-ಮೇಲ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಯ ಐದು ಕಡೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಉಲ್ಲೇಖಿಸಿದ್ದು, ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಂಗಾಲಾದರು. ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಭಯಭೀತ ವಾತಾವರಣ ನಿರ್ಮಾಣವಾಯಿತು.
ಸುದ್ದಿ ತಿಳಿಯುತ್ತಿದ್ದಂತೆ ಶ್ವಾನದಳ, ಬಾಂಬ್ ಪತ್ತೆದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಜಿಲ್ಲಾಡಳಿತ ಭವನದ ಇಂಚಿಂಚು ಪರಿಶೀಲನೆ ನಡೆಸಿದರು. ಡಿವೈಎಸ್ಪಿ ಮುರ್ತುಜಾ ಖಾಜಿ, ಸಿಪಿಐಗಳಾದ ಲಾಲಸಾಬ್ ಜೂಲಕಟ್ಟಿ, ಸಿದ್ದರಾಮೇಶ, ಪಿಎಸ್ಐ ವಿ.ಜಿ. ಪವಾರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಶೋಧ ಕಾರ್ಯಕ್ಕೆ ನೇತೃತ್ವ ವಹಿಸಿದರು.
ಪ್ರಾಥಮಿಕವಾಗಿ ಇದು ತಮಿಳುನಾಡು ಚುನಾವಣೆ ಸಮಯದಲ್ಲಿ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಕಳುಹಿಸಿದ ಬೆದರಿಕೆ ಸಂದೇಶವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪಾಕಿಸ್ತಾನ ಐಎಸ್ಐ ಹಾಗೂ ಎಲ್‍ಟಿಟಿಇ ಕಾರ್ಯಕರ್ತರ ಹೆಸರನ್ನೂ ಇ-ಮೇಲ್‌ನಲ್ಲಿ ಉಲ್ಲೇಖಿಸಿರುವುದರಿಂದ ಪೊಲೀಸರು ವಿವಿಧ ಕೋನಗಳಿಂದ ತನಿಖೆ ಕೈಗೊಂಡಿದ್ದಾರೆ.
ಇನ್ನೂ ಈ ಕುರಿತು ಗದಗ ಎಸ್ಪಿ ರೋಹನ್ ಜಗದೀಶ್ ಸ್ಪಷ್ಟನೆ ನೀಡಿದ್ದು, ಇದೊಂದು ಮೇಲ್ನೋಟಕ್ಕೆ ಫೇಕ್ ಅನಿಸುತ್ತಿದೆ. ಆದರೂ ಕೂಡಾ ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP