
ಬೆಂಗಳೂರು, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಬಿಹಾರ ಚುನಾವಣೆಯಲ್ಲಿ ಹೀನಾಯ ಸೋಲು ಖಚಿತವಾಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಲವಂತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೂಲಕ ಸುದ್ದಿಗೋಷ್ಠಿ ಮಾಡಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರ ಆರೋಪಗಳು ಸಂಪೂರ್ಣ ಸುಳ್ಳು ಎಂದು ಕಿಡಿಕಾರಿದ ಅಶೋಕ್ ಅವರು, “ಆಟಂ ಬಾಂಬ್, ಹೈಡ್ರೋಜನ್ ಬಾಂಬ್ ಎಂದು ಪದೇ ಪದೇ ಸುಳ್ಳು ಹೇಳಿ ಜನರ ಮುಂದೆ ಈಗಾಗಲೇ ನಗೆಪಾಟಲಿಗೀಡಾದ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಲು ಸಿಎಂ ಮತ್ತು ಡಿಸಿಎಂ ಮನಸ್ಸಿಲ್ಲದಿದ್ದರೂ ಕುರ್ಚಿ ಉಳಿಸಿಕೊಳ್ಳಲು ನಾಮಕಾವಸ್ತೆ ಸುದ್ದಿಗೋಷ್ಠಿ ನಡೆಸಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ತಮ್ಮ ಆರೋಪಗಳಲ್ಲಿ ಹುರುಳಿದ್ದರೆ ಚುನಾವಣಾ ಆಯೋಗ ಕೇಳಿದಂತೆ ಪ್ರಮಾಣಪತ್ರ (ಅಫಿಡವಿಟ್) ಯಾಕೆ ಸಲ್ಲಿಸುತ್ತಿಲ್ಲ? ನ್ಯಾಯಾಲಯದಲ್ಲಿ ಯಾಕೆ ಮೊಕದ್ದಮೆ ದಾಖಲಿಸುತ್ತಿಲ್ಲ? ಎಂದು ಪ್ರಶ್ನೆ ಎಸೆದ ಅಶೋಕ್, “ರಾಹುಲ್ ಗಾಂಧಿ ಅವರ ಆರೋಪಗಳಿಗೆ ಈಗಾಗಲೇ ಚುನಾವಣಾ ಆಯೋಗ ಸೂಕ್ತ ಸ್ಪಷ್ಟನೆ ನೀಡಿದೆ. ಮಾಧ್ಯಮಗಳು ಸಹ ರಾಹುಲ್ ಗಾಂಧಿ ಹೇಳಿದ್ದೆಲ್ಲಾ ಹಸಿ ಸುಳ್ಳು, ಕಟ್ಟುಕಥೆ ಎಂದು ಸಾಬೀತು ಮಾಡಿವೆ. ಇಷ್ಟಾದರೂ ಅವರು ಅದೇ ಸುಳ್ಳನ್ನು ಪುನಃ ಪುನಃ ಹೇಳುತ್ತಿರುವುದು ನಿಜಕ್ಕೂ ಭಂಡತನ,” ಎಂದರು.
ಇದರೊಂದಿಗೆ ಕಾಂಗ್ರೆಸ್ ಪಕ್ಷವೇ ನಿಜವಾದ “ಮತಗಳ್ಳತನ” ಮಾಡುತ್ತಿದೆ ಎಂದು ಅಶೋಕ್ ಗಂಭೀರ ಆರೋಪ ಹೊರಿಸಿದರು. “ಕರ್ನಾಟಕದಲ್ಲಿ ಲಕ್ಷಾಂತರ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗಡಿಪಾರು ಮಾಡದೆ, ಅವರಿಗೆ ರಕ್ಷಣೆಯನ್ನೇ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ನಿಜವಾದ ಉದ್ದೇಶವೇ ಅಕ್ರಮ ಮತದಾನ ಮಾಡಿಸಿ ಚುನಾವಣೆಯಲ್ಲಿ ಗೆಲ್ಲುವುದು,” ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
“ಕಾಂಗ್ರೆಸ್‌ಗೆ ಮತಗಳ್ಳತನದ ಬಗ್ಗೆ ನಿಜವಾದ ಬದ್ಧತೆ ಇದ್ದರೆ, ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಗಡಿಪಾರು ಮಾಡಲಿ,” ಎಂದು ಆರ್. ಅಶೋಕ್ ಸವಾಲು ಹಾಕಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa