
ವಿಜಯಪುರ, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರ ಕರ್ನಾಟಕ ಭಾಗದ ವಿಜಯಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಜಿಲ್ಲಾ ಆಸ್ಪತ್ರೆಯ ಮಕ್ಕಳ ಘಟಕದಲ್ಲಿ ತಾಯಿ ಹಾಲು ಸಂಗ್ರಹಣ ಕೇಂದ್ರ ಸ್ಥಾಪಿಸಲಾಗಿದ್ದು, ಅವಧಿ ಪೂರ್ವ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು ಹಾಗೂ ಮಕ್ಕಳ ಆರೋಗ್ಯ ವೃದ್ದಿಗೆ ಈ ಕೇಂದ್ರ ಅತ್ಯಂತ ಸಹಕಾರಿಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ಜಿಲ್ಲಾಸ್ಪತ್ರೆಯ ಎಂಸಿಎಚ್ ವಿಭಾಗದಲ್ಲಿ ಶನಿವಾರ ಆಶ್ರಯ ಹಸ್ತ ಫೌಂಡೇಶನನ್ 2.60 ಕೋಟಿ ರೂ. ಸಿಎಸ್‍ಆರ್ ಅನುದಾನದಲ್ಲಿ ಸ್ಥಾಪಿಸಲಾದ ಧಾತ್ರಿ ಸಮಗ್ರ ಹಾಲುಣಿಸುವಿಕೆಯ ನಿರ್ವಹಣಾ ಕೇಂದ್ರ ಹಾಗೂ ಮದರ್ ಮಿಲ್ಕ್ ಬ್ಯಾಂಕ್ ಉದ್ಘಾಟಿಸಿ ಅವರು ಮಾತನಾಡಿ, ಪ್ರತಿ ಮಗುವಿಗೆ ತಾಯಿ ಹಾಲು ದೊರೆಯಬೇಕೆಂಬ ಸದುದ್ದೇಶದೊಂದಿಗೆ ಸ್ಥಾಪಿಸಲಾದ ಈ ಹಾಲುಣಿಸುವಿಕೆ ನಿರ್ವಹಣಾ ಕೇಂದ್ರವನ್ನು ಹೈದ್ರಾಬಾದ್‍ನ ಸುಶೇನಾ ಹೆಲ್ಥ್ ಫೌಂಡೇಶನ್ ನಿರ್ವಹಣೆ ಮಾಡಲಿದ್ದು, ನವಜಾತ ಶಿಶುವಿನಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್‍ನ ಹಾಲಿನಿಂದ ಓಇಅಂಯನ್ನು ತಡೆಗಟ್ಟುವುದು, ಹಾಲು ಪಚನ ಕ್ರೀಯೆಯಲ್ಲಿ ಯಾವುದೇ ತೊಂದರೆಗಳಿದ್ದಲ್ಲಿ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ವೆಚ್ಚವಿಲ್ಲದೆಯೆ ನವಜಾತ ಶಿಶುಗಳಲ್ಲಿ ತೂಕ ಹೆಚ್ಚಿಸುವುದು ಮತ್ತು ಅಪೌಷ್ಠಿಕತೆಯನ್ನು ನಿಯಂತ್ರಿಸಲು ಈ ಕೇಂದ್ರದಲ್ಲಿ ಸಂಗ್ರಹಿಸಲಾದ ಹಾಲನ್ನು ನವಾಜಾತ ಶಿಶುಗಳಿಗೆ ತುಂಬಾ ಉಪಯುಕ್ತವಾಗಿದ್ದು, ಕಡಿಮೆ ತೂಕದ ಶಿಶುಗಳು ಜನಿಸಿದಲ್ಲಿ, ಶಸ್ತ್ರಚಿಕಿತ್ಸೆಗೆ ಒಳಗಾದ ನವಜಾತ ಶಿಶುಗಳಿಗೆ, ಶಿಶುವಿಗೆ ತಾಯಿ ಹಾಲು ಉಣಿಸುವ ಉದ್ದೇಶ ಹೊಂದಿರುತ್ತದೆ. ಇದರಿಂದ ಶಿಶುಗಳನ್ನು ಸದೃಡವಾಗಿ ಬೆಳೆಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.
ಪ್ರತಿ ಮಗುವಿಗೆ ತಾಯಿ ಹಾಲು ದೊರೆಯಬೇಕೆಂಬ ಸದುದ್ದೇಶದೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಿರುವುದಕ್ಕೆ ಜಿಲ್ಲಾಸ್ಪತ್ರೆಯ ಕಾರ್ಯಕ್ಕೆ ಅಭಿನಂದಿಸಿದ ಅವರು, ತಾಯಿ ಎದೆಹಾಲು ಶ್ರೇಷ್ಠವಾದದ್ದು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ತಾಯಿ ಎದೆಹಾಲು ಅತ್ಯವಶ್ಯಕವಾಗಿದ್ದು, ಮಕ್ಕಳ ಬೆಳವಣಿಗೆಗೆ ತಾಯಿ ಹಾಲು ಶಕ್ತಿ ನೀಡಲಿದ್ದು, ಈ ಕೇಂದ್ರ ಸ್ಥಾಪನೆಯಿಂದ ಶಿಶುಗಳ ಆರೋಗ್ಯವೃದ್ದಿಗೆ ಸಹಕಾರಿಯಾಗಲಿದೆ. ಈ ಕುರಿತು ಆಶಾ ಕಾರ್ಯಕರ್ತೆಯರು ಸೂಕ್ತ-ಜಾಗೃತಿ ತಿಳುವಳಿಕೆ ಮೂಡಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಡಾ.ಆನಂದ ಕೆ., ಯುನಿಸೆಫ್‍ನ ದಕ್ಷಿಣ ಭಾರತದ ಮುಖ್ಯ ಕ್ಷೇತ್ರಾಧಿಕಾರಿ ಡಾ. ಜಲೀಲಂ ತಪ್ಪಸ್ಸೆ, ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ನಿರ್ದೇಶಕರಾದ ನಂದಕಿಶೋರ ಶರ್ಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್‍ಕುಮಾರ ಗುಣಾರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಆರೋಗ್ಯ ವೈದ್ಯಾಧಿಕಾರಿ, ನರ್ಸಿಂಗ್ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande