




ಬಳ್ಳಾರಿ, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು `ಮುಖ್ಯಮಂತ್ರಿ' ಹುದ್ದೆಗೆ ಬಡ್ತಿ ಪಡೆಯಲು ಸಂಕಲ್ಪ ಮಾಡಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗ ಜೆ.ಎಸ್. ಆಂಜನೇಯಲು ಅವರು ಬಾಲಾಜಿ ಕ್ಯಾಂಪ್‍ನ ಅಮೃತೇಶ್ವರ ಗುಡಿಯಲ್ಲಿ ಎರೆಡು ದಿನಗಳ ಯಾಗ-ಹೋಮಗಳನ್ನು ಶನಿವಾರ ಆರಂಭಿಸಿದ್ದು, ಭಾನುವಾರ ಪೂರ್ಣಾಹುತಿಗೊಳ್ಳಲಿದೆ.
ಜೆ.ಎಸ್. ಆಂಜನೇಯಲು ಅವರು, ದಂಪತಿ ಸಮೇತ ಹೋಮ - ಹವನ ಮತ್ತು ಯಾಗಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಡಿ.ಕೆ. ಶಿವಕುಮಾರ್ ಅವರು `ಮುಖ್ಯಮಂತ್ರಿ' ಹುದ್ದೆಗೆ ಬಡ್ತಿಯನ್ನು ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲವರ್ಧನೆ ಮಾಡಬೇಕು ಎಂದು ಸಂಕಲ್ಪತೊಟ್ಟು ಪ್ರಾರ್ಥನೆಯನ್ನು ನೆರವೇರಿಸಿದರು.
ಮೊದಲನೆಯ ದಿನವಾದ ಶನಿವಾರ ರಾಜ ಶ್ಯಾಮಲ ಯಾಗ, ಚಂಡಿಕಾ ಯಾಗ, ರುದ್ರಯಾಗ, ಸುದರ್ಶನ ಯಾಗ. ಗಣಪತಿ ಹೋಮಗಳನ್ನು ನೆರವೇರಿಸಲಾಗಿದೆ. ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನ ಪ್ರಖ್ಯಾತ ಅರ್ಚಕರ 25 ಪರಿಣಿತರ ತಂಡವು ಈ ಹೋಮ, ಹವನ ಮತ್ತು ಯಾಗ ಪೂಜೆಗಳನ್ನು ವಿಧಿವಕ್ತವಾಗಿ ನೆರವೇರಿಸುತ್ತಿದೆ.
ಜೆ.ಎಸ್. ಆಂಜನೇಯಲು ಅವರು, ಡಿ.ಕೆ. ಶಿವಕುಮಾರ್ ಅವರ ಕಟ್ಟಾಬೆಂಬಲಿಗನಾಗಿ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿರುವ ನಾನು ಕುಟುಂಬ ಸಮೇತನಾಗಿ ಅವರ ಶ್ರೇಯಸ್ಸಿಗೆ, ಹಿತಕ್ಕೆ ಶ್ರದ್ಧೆ, ಭಕ್ತಿ ಮತ್ತು ಸಂಪ್ರದಾಯಬದ್ಧವಾಗಿ ವಿವಿಧ ಯಾಗ, ಹೋಮ - ಹವನಗಳನ್ನು ಹಮ್ಮಿಕೊಂಡಿರುವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್