ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಖಾಜಿಕಲ್ಲಹಳ್ಳಿ ಮುನಿರಾಜು ಆಯ್ಕೆ
ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಖಾಜಿಕಲ್ಲಹಳ್ಳಿ ಮುನಿರಾಜು ಆಯ್ಕೆ
ಚಿತ್ರ : ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೋಲಾರ ತಾಲ್ಲೂಕಿನ ಖಾಜಿಕಲ್ಲಹಳ್ಳಿ ಮುನಿರಾಜು ಆಯ್ಕೆಯಾದರು.


ಕೋಲಾರ, 0೫ ನವೆಂಬರ್ (ಹಿ.ಸ.) :

ಆಂಕರ್ : ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಖಾಜಿಕಲ್ಲಹಳ್ಳಿ ಮುನಿರಾಜು ಆಯ್ಕೆಯಾದರು.

ಮುನಿರಾಜು ಕೋಲಾರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದ ನಿರ್ದೇಶನ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಬ್ಯಾಂಕ್ನ ೧೨ ನಿರ್ದೇಶಕರ ಸ್ಥಾನಕ್ಕೆ (ಒಟ್ಟು ೧೮ ನಿರ್ದೇಶಕರ ಪೈಕಿ ೬ ಮಂದಿ ಅವಿರೋಧ ಆಯ್ಕೆ) ಮೇ ೨೮ರಂದು ಚುನಾವಣೆ ನಡೆದಿತ್ತು.

ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು ೧೨ ಮತಗಳು ಇದ್ದವು. ಅದರಲ್ಲಿ ಆಗ ಮುನಿರಾಜು ೫ ಮತ ಹಾಗೂ ಮೈತ್ರಿಕೂಟದ ಆನಂದ್ ೬ ಮತ ಪಡೆದಿದ್ದರು. ಕ್ಯಾಲನೂರು ಸೊಸೈಟಿಗೆ ಸಂಬಂಧಿಸಿದ ಒಂದು ಮತದ ಹಕ್ಕಿನ ವಿಚಾರದಲ್ಲಿ ನ್ಯಾಯಾಲಯ ಮೊರೆ ಹೋಗಲಾಗಿತ್ತು.

ಕ್ಯಾಲನೂರು ಸೊಸೈಟಿ ವಿರುದ್ಧ ಸಲ್ಲಿಕೆಯಾ ಗಿದ್ದ ಅರ್ಜಿಯು ಇತ್ಯರ್ಥಗೊಂಡಿದ್ದು, ಎಣಿಕೆ ನಡೆಸಲು ನ್ಯಾಯಾಲಯ ಆದೇಶಿಸಿತ್ತು. ಡಿಸಿಸಿ ಬ್ಯಾಂಕ್ ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್.ಮೈತ್ರಿ ಅವರು ಉಭಯ ಅಭ್ಯರ್ಥಿಗಳ ಸಮ್ಮುಖದಲ್ಲಿ ಬುಧವಾರ ಮತಪೆಟ್ಟಿಗೆ ತೆಗೆದು ಎಣಿಕೆ ನಡೆಸಿದರು.

ಆ ಮತ ಮುನಿರಾಜು ಅವರ ಪರವಾಗಿತ್ತು. ಇದರಿಂದ ಇಬ್ಬರಿಗೂ ತಲಾ ಆರು ಮತಗಳು ಬಂದಂತಾಗಿ ಸಮಬಲವಾಯಿತು. ಫಲಿತಾಂಶ ನಿರ್ಧರಿಸಲು ಡಾ.ಮೈತ್ರಿ ಅವರು ಲಾಟರಿ ಮೊರೆ ಹೋದರು.

ಇಬ್ಬರ ಹೆಸರನ್ನು ಪೆಟ್ಟಿಗೆಗೆ ಬರೆದು ಹಾಕಿ ಲಾಟರಿ ಎತ್ತಿದರು. ಅದರಲ್ಲೂ ಮುನಿರಾಜು ಅವರಿಗೆ ಅದೃಷ್ಟ ಒಲಿ ಯಿತು. ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮುನಿರಾಜು ಅವರು ಬೆಂಬಲಿಗರೊಂದಿಗೆ ಸಂಭ್ರಮಿಸಿದರು. ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಕೋಲಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಮುಖಂಡ ನಂದಿನಿ ಪ್ರವೀಣ್ ಸೇರಿದಂತೆ ಹಲವರು ಹೂಮಾಲೆ ಹಾಕಿ ಅಭಿನಂದಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರಾಜು, ಈ ಗೆಲುವಿಗೆ ಕೋಲಾರ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿಗಳಾದ ಅನಿಲ್ ಕುಮಾರ್, ನಸೀರ್ ಅಹ್ಮದ್, ಸಚಿವರಾದ ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಕೃಷ್ಣಬೈರೇಗೌಡ, ಶಾಸಕ ನಂಜೇಗೌಡ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಕಾರಣ ಎಂದರು.

ನಾನು ಈ ಹಿಂದೆ ಡಿಸಿಸಿ ಬ್ಯಾಂಕ್ನಲ್ಲಿ ೧೫ ವರ್ಷ ಉದ್ಯೋಗಿಯಾಗಿ ಕೆಲಸ ಮಾಡಿದ್ದೆ. ೨೦೧೩ರಲ್ಲಿ ವಿಆರ್ಎಸ್ ತೆಗೆದುಕೊಂಡಿದ್ದೆ. ಈಗ ನಿರ್ದೇಶಕನಾಗಿ ಬಂದಿದ್ದೇನೆ. ಐದು ವರ್ಷಗಳ ಹಿಂದೆ ಇದ್ದ ರೀತಿ ಬ್ಯಾಂಕ್ ಅನ್ನು ಸದೃಢ ಗೊಳಿಸುವುದು ನಮ್ಮ ಗುರಿ. ಮಹಿಳೆಯರು, ರೈತರಿಗೆ ಶೂನ್ಯ ದರದಲ್ಲಿ ಸಾಲಕೊಡಿಸಿ ಬ್ಯಾಂಕ್ ಅನ್ನು ಉತ್ತಮ ಸ್ಥಿತಿಗೆ ತಲುಪಿಸುವ ಉದ್ದೇಶ ಹೊಂದಿದ್ದೇವೆ ಎಂದರು.

ಚಿತ್ರ : ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೋಲಾರ ತಾಲ್ಲೂಕಿನ ಖಾಜಿಕಲ್ಲಹಳ್ಳಿ ಮುನಿರಾಜು ಆಯ್ಕೆಯಾದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande