
ಗದಗ, 03 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುವಂತ ಹೇಳಿಕೆ ನೀಡಿರುವ ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು, ನವೆಂಬರ್‌ನ ಬಳಿಕ ಕಾಂಗ್ರೆಸ್ ಸರ್ಕಾರ ಬಿದ್ದು, ಡಿಸೆಂಬರ್ ಒಳಗಾಗಿ ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಗದಗ ನಗರದಲ್ಲಿ ಮಾಧ್ಯಮಗೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರದ ಒಳಗೇ ಭಾರೀ ಅಸಮಾಧಾನ ಉಂಟಾಗಿದೆ. ಸಚಿವ ಸ್ಥಾನ ಪಡೆಯಲು ಕಪ್ಪುಹಣ ಅಗತ್ಯವಿದೆ. ಹಣ ನೀಡದವರು ಸಚಿವರಾಗಲು ಸಾಧ್ಯವಿಲ್ಲ.
“ರಾಜಣ್ಣ ಅವರನ್ನು ಸಂಪುಟದಿಂದ ಯಾವುದೇ ಕಾರಣವಿಲ್ಲದೆ ತೆಗೆದು ಹಾಕಲಾಗಿದೆ. ಇಂದಿನ ಸರ್ಕಾರದಲ್ಲಿ ಸಚಿವರಿಗೆ ಟಾರ್ಗೆಟ್ ನಿಗದಿಪಡಿಸಿ ಹಣ ಸಂಗ್ರಹ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ. ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ,” ಎಂದು ಹೇಳಿದರು.
ಸಿದ್ದರಾಮಯ್ಯ–ಡಿಕೆ ಶಿವಕುಮಾರ್ ನಡುವಿನ ನಾಯಕತ್ವದ ಪೈಪೋಟಿ ಕುರಿತು ಮಾತನಾಡಿದ ಶ್ರೀರಾಮುಲು, “ಡಿಕೆಶಿ ಸನ್ಯಾಸಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೈಕಮಾಂಡ್ ಫೈನಲ್ ಅಂತಾ ಹೇಳ್ತಾರೆ, ಆದರೆ ಒಳಗೆ ಗೊಂದಲ ಮಾತ್ರ ಹೆಚ್ಚಾಗಿದೆ,” ಎಂದು ವ್ಯಂಗ್ಯವಾಡಿದರು.
ವಾಲ್ಮೀಕಿ ನಿಗಮದ ಹಣ ತೆಲಂಗಾಣಕ್ಕೆ ಕಳುಹಿಸಿರುವುದರ ಕುರಿತು ಅವರು ರಾಹುಲ್ ಗಾಂಧಿ ಅವರನ್ನೇ ಕಾರಣೀಕರಿಸಿ, “ಭ್ರಷ್ಟಾಚಾರದ ಪಿತಾಮಹರು ಸಿಎಂ ಮತ್ತು ಡಿಸಿಎಂ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶ್ರೀರಾಮುಲು ಅವರ ಈ ಹೇಳಿಕೆ ರಾಜ್ಯದ ರಾಜಕೀಯದಲ್ಲಿ ಹೊಸ ಕುತೂಹಲ ಮೂಡಿಸಿದೆ.
ಸರ್ಕಾರ ಬಿದ್ದುಹೊಗುತ್ತದೆಯಾ, ಹೊಸ ನಾಯಕತ್ವ ಬರಬಹುದಾ ಎಂಬ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP