


ರಾಯಚೂರು, 21 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷಿ,, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆ ಕುರಿತಂತೆ ಎಲ್‌ಇಡಿ ವಾಹನದ ಮೂಲಕ ಕಿರುಚಿತ್ರಗಳ ಪ್ರದರ್ಶನ, ಸಂಗೀತ, ಬೀದಿ ನಾಟಕದಿಂದ ಜನಸಾಮಾನ್ಯರಿಗೆ ಮಾಹಿತಿ ಹಾಗೂ ಪ್ರಚಾರ ನೀಡಲು ಹಮ್ಮಿಕೊಂಡಿರುವ ಕಲಾ ಜಾಥಾಕ್ಕೆ ಚಾಲನೆ ಸಿಕ್ಕಿತು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾಮಟ್ಟದ ಸಮಿತಿಯ ಉಪಾಧ್ಯಕ್ಷರಾದ ನಾಗೇಂದ್ರ ಮಟಮಾರಿ, ಹನುಮಂತಪ್ಪ ಜಾಲಿಬೆಂಚಿ ಹಾಗೂ ತಾಲೂಕುಮಟ್ಟದ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ ಅವರು ಹಸಿರು ನಿಶಾನೆ ತೋರುವ ಮೂಲಕ ಕಲಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಹನುಮಂತಪ್ಪ ಜಾಲಿಬೆಂಚಿ ಅವರು, ಜನತೆಗೆ ಮಾತು ನೀಡಿದಂತೆ ರಾಜ್ಯ ಸರ್ಕಾರವು ವಾರ್ಷಿಕವಾಗಿ 52.000 ಕೋಟಿ ರೂ ಬಳಕೆ ಮಾಡಿ ಎಲ್ಲ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಬದ್ಧತೆಯನ್ನು ಉಳಿಸಿಕೊಂಡಿದೆ. ಈ ಯೋಜನೆಗಳಿಂದ ರಾಜ್ಯದ ಜನತೆಗೆ ಸಾಕಷ್ಟು ಅನುಕೂಲವಾಗಿದೆ. ಈ ಬಗ್ಗೆ ಪ್ರಚಾರ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದರು.
ನಾಗೇಂದ್ರ ಮಟಮಾರಿ ಅವರು ಮಾತನಾಡಿ, ರಾಜ್ಯದ 7 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳು ಬದುಕು ನೀಡಿದೆ. ರಾಜ್ಯದ ಶೇ.96ರಷ್ಟು ಜನ ಒಂದಲ್ಲಾ ಒಂದು ರೀತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಈ ಮಾಹಿತಿಯು ಜಿಲ್ಲೆಯ ಪ್ರತಿ ಮನೆಮನೆ ಬಾಗಿಲಿಗೆ ಹೋಗಬೇಕು ಎಂದು ತಿಳಿಸಿದರು.
ಪವನ್ ಕಿಶೋರ್ ಪಾಟೀಲ ಅವರು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ರಾಯಚೂರು ಜಿಲ್ಲೆಯಲ್ಲಿ ಸಹ ಅಚ್ಚುಕಟ್ಟಾಗಿ ಅನುಷ್ಠಾನವಾಗುತ್ತಿವೆ. ಗೃಹಲಕ್ಷಿö್ಮ ಯೋಜನೆಯ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆಗೆ 5ನೇ ಸ್ಥಾನ ಲಭಿಸಿದೆ. ಯುವನಿಧಿ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲಿಯೇ ನಾವು 3ನೇ ಸ್ಥಾನದಲ್ಲಿದ್ದೇವೆ. ಕಲಾ ಜಾಥಾ ತಂಡದಲ್ಲಿರುವ ಎಲ್ಲರೂ ಪ್ರಚಾರ ರಾಯಭಾರಿಗಳು ನಾವು ಎಂದು ಭಾವಿಸಿ ಜಿಲ್ಲೆಯಲ್ಲಿ ಪ್ರಚಾರ ಕಾರ್ಯವನ್ನು ಶಿಸ್ತುಬದ್ಧವಾಗಿ ನಡೆಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಡಾ.ಟಿ.ರೋಣಿ ಅವರು ಮಾತನಾಡಿ, ಅರ್ಹ ಪ್ರತಿಯೊಬ್ಬರು ಸಹ ಈ ಪಂಚ ಗ್ಯಾರಂಟಿ ಯೋಜನೆಗಳ ಪಾಲುದಾರರಾಗುವ ನಿಟ್ಟಿನಲ್ಲಿ ವಾರ್ತಾ ಇಲಾಖೆಯಿಂದ ಪ್ರಚಾರ ಕಾರ್ಯಗಳು ವ್ಯವಸ್ಥಿತವಾಗಿ ನಡೆಯಬೇಕು ಎಂದು ತಿಳಿಸಿದರು.
ವಾರ್ತಾ ಸಹಾಯಕರಾದ ಗವಿಸಿದ್ದಪ್ಪ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ವಾರ್ತಾ ಇಲಾಖೆಯ ಪ್ರಕಾಶ, ಅಪ್ರೆಂಟಿಸ್ ತರಬೇತುದಾರ ಲವ, ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕಲಾವಿದರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್