
ನವದೆಹಲಿ, 20 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಶ್ವ ಶೌಚಾಲಯ ದಿನದಂದು ಕೇಂದ್ರ ಜಲಶಕ್ತಿ ಸಚಿವಾಲಯವು “ನಮ್ಮ ಶೌಚಾಲಯ, ನಮ್ಮ ಭವಿಷ್ಯ” ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ. ಡಿಸೆಂಬರ್ 10 ರವರೆಗೆ ನಡೆಯುವ ಈ ಅಭಿಯಾನದಡಿ ಗ್ರಾಮೀಣ ಪ್ರದೇಶಗಳಲ್ಲಿನ ಸಮುದಾಯ ಹಾಗೂ ಮನೆಗಳ ಶೌಚಾಲಯಗಳನ್ನು ಪರಿಶೀಲನೆ, ದುರಸ್ತಿ, ಸುಂದರೀಕರಣ ಮತ್ತು ಕಾರ್ಯನಿರ್ವಹಣೆಯ ಬಲಪಡಿಸುವ ಕಾರ್ಯಗಳು ನಡೆಯಲಿವೆ.
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಅಡಿಯಲ್ಲಿ ನಿರ್ಮಿಸಲಾದ ಶೌಚಾಲಯಗಳ ಸುಸ್ಥಿರತೆ, ನೈರ್ಮಲ್ಯ ನಡವಳಿಕೆಗಳ ಉತ್ತೇಜನ ಮತ್ತು ಮಲ ಕೆಸರು ನಿರ್ವಹಣೆಯ ಜಾಗೃತಿ ಅಭಿಯಾನಗಳು ಶಾಲೆಗಳಲ್ಲಿ ಹಾಗೂ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತದೆ.
ಗ್ರಾಮ ಪಂಚಾಯತ್‌ನಿಂದ ಜಿಲ್ಲಾಮಟ್ಟದವರೆಗೆ ವಿವಿಧ ಇಲಾಖೆಗಳಿಗೆ ಜವಾಬ್ದಾರಿಗಳನ್ನು ನೀಡಲಾಗಿದೆ. ಪದ್ಮ ಗೌರವ ಪಡೆದವರು, ಮಾಜಿ ಸೈನಿಕರು, ಹಿರಿಯರು, ಯುವಕರ ಗುಂಪುಗಳು, ಶಾಲಾ ಮಕ್ಕಳು ಮುಂತಾದವರನ್ನು ಜಾಗೃತಿಯಲ್ಲಿ ಭಾಗವಹಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ನೈರ್ಮಲ್ಯ ಕಾರ್ಯಕರ್ತರಿಗೆ ಸನ್ಮಾನ, ಅಗತ್ಯ ಕುಟುಂಬಗಳಿಗೆ ಶೌಚಾಲಯ ಸ್ವೀಕಾರ ಪತ್ರ ವಿತರಣೆಯೂ ನಡೆಯಲಿದೆ.
2014ರಲ್ಲಿ ಪ್ರಾರಂಭವಾದ ಸ್ವಚ್ಛ ಭಾರತ ಮಿಷನ್ ಮೂಲಕ 2019ರ ಹೊತ್ತಿಗೆ 110 ದಶಲಕ್ಷಕ್ಕೂ ಹೆಚ್ಚು ಶೌಚಾಲಯಗಳು ನಿರ್ಮಿತವಾಗಿವೆ. ಎರಡನೇ ಹಂತ (2020) ಬಯಲು ಮಲವಿಸರ್ಜನೆ ಮುಕ್ತ ಸ್ಥಿತಿಯ ಸ್ಥಿರತೆಯ ಮೇಲೆ ಮತ್ತು ಗ್ರಾಮಗಳನ್ನು ODF+ ಮಾದರಿ ಗ್ರಾಮಗಳಾಗಿ ಪರಿವರ್ತಿಸುವತ್ತ ಕೇಂದ್ರೀಕರಿಸಿದೆ. ಈ ಕಾರ್ಯಗಳನ್ನು ಮತ್ತಷ್ಟು ಬಲಪಡಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa