
ಚಂಡೀಗಢ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಪಂಜಾಬ್‌ನ ಗಡಿ ಜಿಲ್ಲೆಯಾದ ಫಿರೋಜ್‌ಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನನ್ನು ಶನಿವಾರ ತಡರಾತ್ರಿ ಅಪರಿಚಿತ ಮುಸುಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತನನ್ನು ನವೀನ್ ಅರೋರಾ (40) ಎಂದು ಗುರುತಿಸಲಾಗಿದೆ.
ನವೀನ್ ಅರೋರಾ ಫಿರೋಜ್‌ಪುರದ ಮುಖ್ಯ ಮಾರುಕಟ್ಟೆಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ರಾತ್ರಿ ಅಂಗಡಿ ಮುಚ್ಚಿ ಮನೆಗೆ ಹಿಂತಿರುಗುತ್ತಿದ್ದಾಗ ಬೈಕ್ನಲ್ಲಿ ಬಂದ ಅಜ್ಞಾತ ಶಸ್ತ್ರಧಾರಿಗಳು ಅವರ ಮೇಲೆ ಹೊಂಚು ಹಾಕಿ ತಲೆಗೆ ಗುಂಡು ಹಾರಿಸಿದ್ದಾರೆ. ಗಂಭೀರ ಗಾಯಗೊಂಡ ನವೀನ್ ಅವರನ್ನು ಸ್ಥಳೀಯರು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ನವೀನ್ ಅರೋರಾ, ಫಿರೋಜ್‌ಪುರದ ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ಬಲದೇವ್ ರಾಜ್ ಅರೋರಾ ಅವರ ಪುತ್ರ. ಅವರ ಅಜ್ಜ, ದಿವಂಗತ ದೀನಾನಾಥ್ ಅರೋರಾ, 1940-50ರ ದಶಕದಲ್ಲಿ ಪಂಜಾಬ್ ಗಡಿ ಪ್ರದೇಶಗಳಲ್ಲಿ ಸಂಘದ ಶಾಖೆಗಳನ್ನು ಆರಂಭಿಸಿದ ಪ್ರಮುಖ ಕಾರ್ಯಕರ್ತರಾಗಿದ್ದರು.
ಘಟನೆಯ ನಂತರ ಎಸ್‌ಎಸ್‌ಪಿ ಭೂಪೇಂದ್ರ ಸಿಂಗ್ ಹಾಗೂ ಶಾಸಕ ರಣವೀರ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa