
ನವದೆಹಲಿ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 32 ಮಂದಿಗೆ ಗಾಯವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶನಿವಾರ ಅಧಿಕೃತವಾಗಿ ಪ್ರಕಟಿಸಿದೆ. ಘಟನೆಯ ನಿಖರ ಕಾರಣವನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿರುವುದಾಗಿ ಸಚಿವಾಲಯ ಸ್ಪಷ್ಟಪಡಿಸಿದೆ.
ಘಟನೆಯ ಕುರಿತು ಮಾಹಿತಿ ನೀಡಿದ ಜಂಟಿ ಕಾರ್ಯದರ್ಶಿ (ಜೆ&ಕೆ ವಿಭಾಗ) ಪ್ರಶಾಂತ್ ಲೋಖಂಡೆ ಅವರು, ನೌಗಮ್ ಠಾಣೆ ಇತ್ತೀಚೆಗೆ ಒಂದು ಭಯೋತ್ಪಾದಕ ಮಾಡ್ಯೂಲ್ ಭೇದಿಸಿದ ನಂತರ ವಶಪಡಿಸಿಕೊಂಡ ಸ್ಫೋಟಕ ವಸ್ತುಗಳು ಮತ್ತು ರಾಸಾಯನಿಕಗಳನ್ನು ಠಾಣೆ ಆವರಣದಲ್ಲೇ ಸುರಕ್ಷಿತವಾಗಿ ಸಂಗ್ರಹಿಸಲಾಗಿತ್ತು ಎಂದು ತಿಳಿಸಿದರು.
ಈ ವಸ್ತುಗಳನ್ನು ರಾಸಾಯನಿಕ ಹಾಗೂ ವಿಧಿವಿಜ್ಞಾನ ಪರಿಶೀಲನೆಗೆ ಕಳುಹಿಸುವ ಪ್ರಕ್ರಿಯೆ ಎರಡು ದಿನಗಳಿಂದ ನಡೆಯುತ್ತಿತ್ತು. “ಸ್ಫೋಟಕಗಳ ಬಾಷ್ಪಶೀಲ ಸ್ವಭಾವ ಮತ್ತು ಸೂಕ್ಷ್ಮತೆಯನ್ನು ಗಮನಿಸಿ ಅವುಗಳನ್ನು ತಜ್ಞರ ಮೇಲ್ವಿಚಾರಣೆಯಲ್ಲಿ ನಿರ್ವಹಿಸಲಾಗುತ್ತಿತ್ತು. ಇದೇ ವೇಳೆ ಶುಕ್ರವಾರ ರಾತ್ರಿ 11.20ರ ಸುಮಾರಿಗೆ ಆತಂಕಕಾರಿ ಸ್ಫೋಟ ಸಂಭವಿಸಿತು ಎಂದು ಅವರು ವಿವರಿಸಿದರು.
ಘಟನೆಯ ಕುರಿತು ತನಿಖೆ ಮುಂದುವರಿದಿದೆ. ಕಾರಣದ ಬಗ್ಗೆ ಯಾವುದೇ ಊಹಾಪೋಹಗಳು ಅನಗತ್ಯ. ಸರ್ಕಾರ ಮೃತರ ಕುಟುಂಬಗಳೊಂದಿಗೆ ನಿಲ್ಲುತ್ತದೆ ಎಂದು ಲೋಖಂಡೆ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa