
ನವದೆಹಲಿ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 9 ಮಂದಿ ದುರ್ಮರಣ ಹೊಂದಿ, 29 ಮಂದಿ ಗಾಯಗೊಂಡಿರುವುದು ದೇಶವನ್ನೇ ಬೆಚ್ಚಿ ಬೀಳಿಸಿದೆ. ಇತ್ತೀಚೆಗಷ್ಟೇ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರ್ ಸ್ಫೋಟ ಭಯೋತ್ಪಾದಕ ದಾಳಿಯ ನಂತರ ಈ ಘಟನೆ ಸಂಭವಿಸಿರುವುದು ಗಂಭೀರ ಚಿಂತೆ ಮೂಡಿಸಿದೆ. ಘಟನೆಯ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ತೀವ್ರ ಆಘಾತ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , 9 ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವುದು ದುರಂತ. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಾಂತ್ವನ. ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ದೊರೆಯಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.
ದೆಹಲಿಯ ಕೆಂಪು ಕೋಟೆ ದಾಳಿಯ ಕೆಲವೇ ದಿನಗಳ ಬಳಿಕ ಮತ್ತೆ ಭಯೋತ್ಪಾದಕ ಚಟುವಟಿಕೆಗಳು ನಡೆದಿರುವುದು ಕೇಂದ್ರ ಸರ್ಕಾರದ ಗುಪ್ತಚರ ವ್ಯವಸ್ಥೆಯ ವೈಫಲ್ಯವನ್ನು ಬಯಲಿಗೆಳೆಯುತ್ತದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗುಪ್ತಚರ ಮತ್ತು ಭಯೋತ್ಪಾದನಾ ನಿಗ್ರಹ ವ್ಯವಸ್ಥೆಯನ್ನು ತಕ್ಷಣ ಬಲಪಡಿಸಬೇಕು” ಎಂದು ಅವರು ಹೇಳಿದರು.
ಭಯೋತ್ಪಾದನೆಯ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಷ್ಟ್ರದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದ ಖರ್ಗೆ, ಬಾಹ್ಯ ಶಕ್ತಿಗಳ ಬೆಂಬಲದಿಂದ ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಎಲ್ಲ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲು ಕೇಂದ್ರ ಸರಕಾರ ಸರ್ವಪಕ್ಷ ಸಭೆ ಕರೆಯುವುದು ತುರ್ತು ಅಗತ್ಯ” ಎಂದು ಖರ್ಗೆ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa