ಮೆಣಸಿನಕಾಯಿ ಬೆಳೆಯಿಂದ ಆದಾಯ ವೃದ್ದಿ : ಡಿಸಿ ಸಂಗಪ್ಪ
ವಿಜಯಪುರ, 30 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಸಾಯನಿಕಗಳ ಬಳಕೆ, ಸಸ್ಯರೋಗ ಮತ್ತು ಕೀಟ ನಿರ್ವಹಣೆ ಮುಂತಾದ ಸಮಗ್ರ ಕೃಷಿ ಪದ್ಧತಿಯಿಂದ ಮೆಣಸಿನಕಾಯಿ ಬೆಳೆ ಬೆಳೆಯುವುದರಿಂದ ರೈತರು ಅಧಿಕ ಆದಾಯ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಅಭಿಪ್ರಾಯ ಪಟ್ಟರು. ತೋವಿವಿಯ ಸಭಾಭವನದಲ್ಲಿ ಮ
ಮೆಣಸಿನಕಾಯಿ ಬೆಳೆಯಿಂದ ಆದಾಯ ವೃದ್ದಿ : ಡಿಸಿ ಸಂಗಪ್ಪ


ವಿಜಯಪುರ, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಸಾಯನಿಕಗಳ ಬಳಕೆ, ಸಸ್ಯರೋಗ ಮತ್ತು ಕೀಟ ನಿರ್ವಹಣೆ ಮುಂತಾದ ಸಮಗ್ರ ಕೃಷಿ ಪದ್ಧತಿಯಿಂದ ಮೆಣಸಿನಕಾಯಿ ಬೆಳೆ ಬೆಳೆಯುವುದರಿಂದ ರೈತರು ಅಧಿಕ ಆದಾಯ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಅಭಿಪ್ರಾಯ ಪಟ್ಟರು.

ತೋವಿವಿಯ ಸಭಾಭವನದಲ್ಲಿ ಮೂರು ದಿನಗಳ ಕಾಲ ನಡೆದ ಮೆಣಸಿನಕಾಯಿ ಬೆಳೆ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಮೆಣಸಿನಕಾಯಿ ದೇಶದ ಕೆಲವು ರಾಜ್ಯಗಳಲ್ಲಿ ಪ್ರಮುಖವಾಗಿ ಬೆಳೆದರೂ ರಫ್ತು ಮಾರುಕಟ್ಟೆಯಲ್ಲಿ ಹೆಸರು ಗಳಿಸಿದ್ದು ನಮ್ಮ ಹೆಮ್ಮೆಯ ವಿಷಯವಾಗಿದೆ. ಆಂದ್ರ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಮುಖ್ಯ ಬೆಳೆಯಾಗಿರುವ ಮೆಣಸಿನಕಾಯಿಯು ಇಂದು ಪ್ರಯೋಗಾಲಯದಿಂದ ಜಮೀನಿಗೆ, ಜಮೀನಿನಿಂದ ಜಾಗತೀಕರಣದ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.

ತೋವಿವಿಯಿಂದ ಬಿಡುಗಡೆಗೊಂಡ ಕೃಷ್ಣಪ್ರಭಾ ರುದ್ರ ಬಗ್ಗೆ ಮೆಚ್ಚುಗೆ ಸೂಸಿದ ಅವರು ಮೆಣಸಿನಕಾಯಿ ಬರೀ ಆಹಾರಕ್ಕಷ್ಟೇ ಅಲ್ಲ, ಸೌಂಧರ್ಯ ಸಾಧನಗಳು, ಔಷಧೀಯ ಮುಂತಾದವುಗಳಲ್ಲಿ ಬಳಸುವುದರಿಂದ ಅನೇಕ ಉದ್ದಿಮೆಗಳು ತಲೆಯೆತ್ತಿವೆ. ಮೆಣಸಿನಕಾಯಿ ಕೊಯ್ಲೋತ್ತರ ತಂತ್ರಜ್ಞಾನದಿಂದ ಅನೇಕ ಸ್ಟಾರ್ಟಅಪ್ ಕಂಪನಿಗಳು ತಲೆಯೆತ್ತಿ ಉದ್ಯೋಗವಕಾಶಗಳು ಹುಟ್ಟಿಕೊಂಡಿವೆ ಎಂದರು.

ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ಮಾತನಾಡಿ ಇಂದು ಮೆಣಸಿನಕಾಯಿ ಕೃಷಿಯಲ್ಲಿ ಸಂಶೋಧನೆಗಳು ಆಗಿದ್ದರೂ ಇನ್ನೂ ಸವಾಲುಗಳೂ ಸಹ ಇವೆ. ಉತ್ತಮ ಗುಣಮಟ್ಟದ ಬೀಜ, ಸಮಗ್ರ ಕೃಷಿ ಪದ್ಧತಿಗಳು ಅವಶ್ಯವಾಗಿವೆ. ಈ ಬೆಳೆಯನ್ನು ಖುಷ್ಕಿ ಭೂಮಿಯಲ್ಲಿ ಅಲ್ಲದೇ ಇಂದು ನೀರಾವರಿಯಲ್ಲಿಯೂ ಸಹ ಬೆಳೆಯುತ್ತಿದ್ದಾರೆ. ಜೊತೆಗೆ ಸರ್ಕಾರದ ಸಾಕಷ್ಟು ಸೌಲಭ್ಯಗಳು ಹಾಗೂ ವಿಜ್ಞಾನಿಗಳ ಮಾರ್ಗದರ್ಶನವನ್ನು ಪಡೆದು ರೈತರು ಮೆಣಸಿನಕಾಯಿ ಕೃಷಿಗೆ ಮನಸ್ಸು ಮಾಡಬೇಕಿದೆ ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತೋವಿವಿ ಕುಲಪತಿ ಡಾ. ವಿಷ್ಣುವರ್ಧನ ಮಾತನಾಡಿ ಈ ಸಮ್ಮೇಳನದಲ್ಲಿ ಪ್ರಬಂಧ ಮಂಡನೆಗಳು, ಭಿತ್ತಿಚಿತ್ರ ಮಂಡನೆಗಳು ಕೇವಲ ವೈಜ್ಞಾನಿಕತೆಯಿಂದ ಮಾತ್ರವಲ್ಲ, ಪ್ರಾಯೋಗಿಕವಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಆಯೋಜನೆಗೊಂಡ ಈ ಸಮ್ಮೇಳನದಿಂದ ರೈತರು ಮತ್ತು ಉದ್ಯಮಿಗಳಿಗೆ ಬಹಳಷ್ಟು ಪ್ರಯೋಜನ ಉಂಟಾಗಿದೆ. ಈ ಸಮ್ಮೇಳನದಿಂದ ಸಾಕಷ್ಟು ಉಪಯುಕ್ತ ಶಿಫಾರಸ್ಸುಗಳು ಹೊರಬಂದಿರುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತೋವಿವಿಯೊಂದಿಗೆ ಭಾರತೀಯ ತೋಟಗಾರಿಕೆ ಸಂಸ್ಥೆ(ಎಐಎಚ್)ಯ ಜೊತೆಗೆ ಒಡಂಬಡಿಕೆ ಒಪ್ಪಂದವಾಯಿತು. ನವದೆಹಲಿ ಭಾ.ಅ.ಕೃ.ಪ ಮಾಜಿ ಉಪಮಹಾನಿರ್ದೇಶಕ ಡಾ.ಎನ್.ಕೆ.ಕೃಷ್ಟಕುಮಾರ್ ಪ್ರತಿ ರಾಜ್ಯದಲ್ಲಿ ಪ್ರತಿ ಪ್ರದೇಶಗಳಲ್ಲಿಯೂ ವಿವಿಧ ತಳಿಯ ಮೆಣಸಿನಕಾಯಿ ಬೆಳೆಗಳನ್ನು ಉತ್ಪಾದಿಸಲಾಗುತ್ತದೆ. ಮೆಣಸಿನಕಾಯಿ ಮಾರಾಟ, ರಫ್ತುವಿನಲ್ಲಿ ರೈತರಿಗೆ ಇರುವ ಸವಾಲುಗಳ ಕುರಿತು ಮಾತನಾಡಿದರು. ಡಾ. ಸುರೇಂದ್ರ ಟಿಕೂ, ನಿರ್ದೇಶಕರು, ಎಟಿಪಿಬಿಆರ್, ಔರಂಗಬಾದ್ ಇವರು ಮೆಣಸಿನಕಾಯಿ ಬೆಳೆಯ ಸಮಗ್ರ ನಿರ್ವಹಣೆಯನ್ನು ಕುರಿತಾಗಿ ಮಾತಾಡಿದರು.

ಡಾ. ಸುರೇಂದ್ರ ಟಿಕೂ, ನಿರ್ದೇಶಕರು, ಎಟಿಪಿಬಿಆರ್, ಔರಂಗಬಾದ್ ಮತ್ತು ಡಾ. ಎನ್. ಕೆ. ಕೃಷ್ಣಕುಮಾರ, ಮಾಜಿ ಉಪಮಹಾನಿರ್ದೇಶಕರು, ಭಾ.ಅ.ಕೃ.ಪ., ನವದೆಹಲಿ ಅವರು ಅತ್ಯುತ್ತಮ ಭಿತ್ತಿಚಿತ್ರಗಳು, ಪ್ರಬಂಧ ಮಂಡನೆಗಳ ಪ್ರಶಸ್ತಿ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಾಯೋಜಕರನ್ನು ಸನ್ಮಾನಿಸಲಾಯಿತು. ಡಾ.ವಸಂತ ಗಾಣಿಗೇರ, ಮೆಣಸಿನಕಾಯಿ ಸಮ್ಮೇಳನದ ಕಾರ್ಯದರ್ಶಿಗಳು ಸ್ವಾಗತಿಸಿದರು. ಡಾ. ಫಕ್ರುದಿನ್ ಸಮ್ಮೇಳನದ ಷರಾ ಸಲ್ಲಿಸಿದರು. ಡಾ. ಅಪರ್ಣಾ ತಿವಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಎಟಿಪಿಬಿಆರ್ ವಂದಿಸಿದರು. ಡಾ. ಪ್ರವೀಣ ಜೋಗಲೀಕರ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande