
ಬಳ್ಳಾರಿ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‍ಒ) ಕಚೇರಿಯು ತನ್ನ ಎಲ್ಲಾ ಪ್ರಾದೇಶಿಕ ಕಚೇರಿ ಮತ್ತು ಪಿಂಚಣಿ ವಿತರಿಸುವ ಬ್ಯಾಂಕ್ ಗಳಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್ಸಿ) ಅಭಿಯಾನ 4.0 ಆರಂಭಿಸಿದೆ ಎಂದು ಜಿಲ್ಲಾ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕೆ.ವಿ.ಪ್ರವೀಣ್ ಅವರು ತಿಳಿಸಿದ್ದಾರೆ.
ಈ ಅಭಿಯಾನವು ನವೆಂಬರ್ 1 ರಿಂದ 30 ರವರೆಗೆ ನಡೆಯಲಿದೆ. ಅಭಿಯಾನದಲ್ಲಿ ಪ್ರತಿಯೊಬ್ಬ ಪಿಂಚಣಿದಾರರು ತಮ್ಮ ಜೀವನ ಪ್ರಮಾಣ ಪತ್ರವನ್ನು ಅನುಕೂಲಕರವಾಗಿ, ಸುರಕ್ಷಿತವಾಗಿ ಮತ್ತು ಕಚೇರಿಗಳಿಗೆ ಭೌತಿಕ ಭೇಟಿಗಳ ಅಗತ್ಯವಿಲ್ಲದೇ ಸಲ್ಲಿಸಬಹುದಾಗಿದೆ.
ಮನೆ ಬಾಗಿಲಿಗೆ ಮತ್ತು ಸಮುದಾಯ ಆಧಾರಿತ ಡಿಜಿಟಲ್ ಸೌಲಭ್ಯಗಳನ್ನು ತರುವ ಮೂಲಕ ಹೆಚ್ಚಿನ ಸಂಖ್ಯೆಯ ಪಿಂಚಣಿದಾರರನ್ನು-ವಿಶೇಷವಾಗಿ ಹಿರಿಯ ನಾಗರಿಕರು, ವಿಕಲಚೇತನರು ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವವರನ್ನು ತಲುಪಲು ಅಭಿಯಾನದ ಉದ್ದೇಶವಾಗಿದೆ.
ಈ ಅಭಿಯಾನದಡಿ ಇಪಿಎಫ್‍ಒ, ಪ್ರಾದೇಶಿಕ ಕಚೇರಿ, ಬಳ್ಳಾರಿ ಪಿಂಚಣಿ ವಿತರಣಾ ಬ್ಯಾಂಕುಗಳು, ಅಂಚೆ ಕಚೇರಿಗಳು, ಸಾಮಾನ್ಯ ಸೇವಾ ಕೇಂದ್ರಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಿಶೇಷ ‘ಡಿಜಿಟಲ್ ಪ್ರಮಾಣ ಪತ್ರ ಶಿಬಿರ’ ಗಳನ್ನು ಆಯೋಜಿಸುತ್ತಿದೆ.
ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ನಿಗದಿತ ಸಮಯದೊಳಗೆ ತಮ್ಮ ಜೀವನ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಶಿಬಿರಗಳಿಗೆ ಭೇಟಿ ನೀಡಬಹುದು. ಎಲ್ಲಾ ಪಿಂಚಣಿದಾರರು ಈ ಸೌಲಭ್ಯ ಲಾಭ ಪಡೆದುಕೊಳ್ಳಬೇಕು ಎಂದು ಇಪಿಎಫ್‍ಒ ಬಳ್ಳಾರಿ ಪ್ರಾದೇಶಿಕ ಕಚೇರಿಯ ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತ ಕೆ.ವಿ.ಪ್ರವೀಣ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್