
ಕೊಪ್ಪಳ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭ್ರಷ್ಟಾಚಾರವು ದೇಶದ ಆರ್ಥಿಕ, ಸಮಾಜಿಕ ಅಭಿವೃದ್ಧಿಗೆ ಬಹು ಮುಖ್ಯ ತೊಡಕಾಗಿದ್ದು, ಅದನ್ನ ಬೇರಿನಿಂದಲೇ ನಿರ್ಮೂಲನೆ ಮಾಡಲು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಭ್ರಷ್ಟಾಚಾರ ವಿರೋಧಿ ಭಾವನೆ ಮೂಡಿಸಬೇಕು, ಸ್ವಯಂ ಭ್ರಷ್ಟಾಚಾರ ವಿರೋಧಿ ಧೋರಣೆ ಅನುಸರಿಸಬೇಕು ಎಂದು ಕರ್ನಾಟಕ ಲೋಕಾಯುಕ್ತದ ಗೌರವಾನ್ವಿತ ಉಪಲೋಕಾಯುಕ್ತರಾದ ನ್ಯಾ. ಬಿ.ವೀರಪ್ಪ ಅವರು ಹೇಳಿದ್ದಾರೆ.
ಗುರುವಾರದಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗೌರವಾನ್ವಿತ ಉಪಲೋಕಾಯುಕ್ತರಿಂದ ಸಾರ್ವಜನಿಕರ ದೂರು, ಅಹವಾಲು ಸ್ವೀಕಾರ ಕಾರ್ಯಕ್ರಮ ಹಾಗೂ ಬಾಕಿ ಇರುವ ಪ್ರಕರಣಗಳ ವಿಚಾರಣೆ ಮತ್ತು ಇದರ ಅಂಗವಾಗಿ ನಡೆದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಭ್ರಷ್ಟಾಚಾರದ ಅರ್ಥ, ಅಪರಾಧದ ಬಗ್ಗೆ ತಿಳಿದಿದ್ದರೂ ಪರೋಕ್ಷವಾಗಿ ಎಲ್ಲರೂ ಆ ಪ್ರಕ್ರಿಯೆಯಲ್ಲಿ ಒಳಗೊಂಡಿರುತ್ತಾರೆ. ಲಂಚ ಪಡೆಯುವುದು ಮಾತ್ರವಲ್ಲ ಕೊಡುವುದು ಕೂಡ ಅಪರಾಧವೇ. ಹಾಗೂ ಭ್ರಷ್ಟಾಚಾರದ ಅರ್ಥ ವ್ಯಾಪ್ತಿ ಕೇವಲ ಲಂಚ ಮಾತ್ರವಲ್ಲ, ದುರಾಡಳಿತ, ಸ್ವಜನ ಪಕ್ಷಪಾತವನ್ನೂ ಒಳಗೊಂಡಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಸ್ವಯಂ ಅರಿವು, ಸ್ವಯಂ ಪ್ರತಿಜ್ಞೆ ಬಹಳ ಮುಖ್ಯ. ಆ ಪ್ರಜ್ಞೆ ಮೂಡಬೇಕೆಂದರೆ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಭ್ರಷ್ಟಾಚಾರ ವಿರೋಧಿ ಭಾವನೆ ಮೂಡಿಸಬೇಕು. ಮಗುವಿನ ಬೆಳವಣಿಗೆಯ ಪ್ರತಿ ಹಂತವೂ ಧನಾತ್ಮಕ ಪ್ರಭಾವ ಹೊಂದಿರಬೇಕು ಎಂದು ಅವರು ಹೇಳಿದರು.
ಎಷ್ಟೇ ಅರಿವಿದ್ದರೂ, ಕಾನೂನು, ಕಾಯ್ದೆಗಳಿದ್ದರೂ ಮತ್ತೆ ಮತ್ತೆ ಭ್ರಷ್ಟಾಚಾರದ ಬಗ್ಗೆ ಅರಿವು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ವಿಷಾದನೀಯ. ಅಧಿಕಾರ ಎಂದರೆ ಭ್ರಷ್ಟಾಚಾರ ಮಾಡಲು ನೀಡಿದ ಲೈಸೆನ್ಸ್ ಅಲ್ಲ ಎಂಬುದನ್ನು ಪ್ರತಿ ಒಬ್ಬ ಸರ್ಕಾರಿ, ಸಾರ್ವಜನಿಕ ಸಂಸ್ಥೆಯ ಅಧಿಕಾರಿ, ನೌಕರ ಅರ್ಥ ಮಾಡಿಕೊಳ್ಳಬೇಕು. ಸ್ವಾತಂತ್ರಪೂರ್ವದಲ್ಲಿ ದೇಶದ ಶೈಕ್ಷಣಿಕ ಮಟ್ಟ ಶೇ.18 ಇತ್ತು, ಪ್ರಸ್ತುತ ಅದು ಶೇ.80 ರಷ್ಟಿದೆ. ಆದರೆ ಮುಂಚಿಗಿಂತ ಈಗಿನ ಕಾಲಘಟ್ಟದಲ್ಲಿ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚು ಕಂಡುಬರುತ್ತವೆ. ಇದನ್ನು ವಿದ್ಯಾವಂತರ ದಡ್ಡತನ ಅಥವಾ ದುರಾಸೆ ಎಂದು ಕರೆಯಬಹುದು ಎಂದು ಉಪಲೋಕಾಯುಕ್ತರು ಅಭಿಪ್ರಾಯ ಪಟ್ಟರು.
ದೇಶದಲ್ಲಿ ಸಂವಿಧಾನವೇ ಸರ್ವೋಚ್ಛ ಹಾಗೂ ಶ್ರೇಷ್ಠವಾದದ್ದು. ಅದನ್ನು ಮೀರಿದವರು ಯಾರೂ ಇಲ್ಲ ಹಾಗು ಯಾವ ಕಾನೂನು ಇಲ್ಲ. ಸಂವಿಧಾನದಲ್ಲಿನ ಅನುಚ್ಛೇದ 21 ಪ್ರತಿ ಜೀವಿಗೂ ಬದುಕುವ ಹಕ್ಕು ನೀಡಿದೆ. ಅದರಂತೆ ಅನುಚ್ಛೇದ 51ಎ ಮೂಲಭೂತ ಕರ್ತವ್ಯಗಳನ್ನು ತಿಳಿಸುತ್ತದೆ. ಪ್ರತಿಯೊಬ್ಬ ವಿದ್ಯಾವಂತ ವ್ಯಕ್ತಿಯೂ ಸಂವಿಧಾನವನ್ನು ಓದಬೇಕು. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ, ಹಕ್ಕುಗಳನ್ನು ನೀಡಿದೆ. ಅವುಗಳನ್ನು ನಾವು ಕಾನೂನಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಸಂವಿಧಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯತಿ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ಇರಬೇಕು. ಸಾರ್ವಜನಿಕರ ಅಗತ್ಯದ ಸಮಯದಲ್ಲಿ ವೈದ್ಯರು, ಅಧಿಕಾರಿಗಳು ಅವರಿಗೆ ಲಭ್ಯವಾಗಬೇಕು. ಈ ಬಗ್ಗೆ ಎಲ್ಲ ಇಲಾಖೆಗಳ ಮುಖ್ಯಸ್ಥರು ನಿರ್ದಿಷ್ಟ ಸುತ್ತೋಲೆ ಹೊರಡಿಸಿ. ಎಪಿಎಂಸಿ, ಕಟ್ಟಡ ಕಾರ್ಮಿಕರಿಗೆ, ಸರಕು ಹಾಗೂ ಸೇವೆ ಡೆಲಿವರಿ ಮಾಡುವ ಉದ್ಯೋಗಿಗಳಿಗೆ ಆಯಾ ಇಲಾಖಾ ವ್ಯಾಪ್ತಿಯ ಅಧಿಕಾರಿಗಳು ಮತುವರ್ಜಿ ವಹಿಸಿ ವಿಮೆ ಮಾಡಿಸಿ ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಮಾತನಾಡಿ, ಅಧಿಕಾರಿ, ನೌಕರರು ಸ್ವಜನ ಪಕ್ಷಪಾತ ಹಾಗೂ ಸ್ವಹಿತಾಸಕ್ತಿಯನ್ನು ಬಿಟ್ಟು ಸಾರ್ವಜನಿಕ ಸೇವೆಗಳನ್ನು ನೀಡಬೇಕು. ಸರ್ಕಾರಿ ಸೇವೆಯು ರಾಜ್ಯ, ದೇಶದ ಅಭಿವೃದ್ದಿಗೆ ಪೂರಕವಾಗಿರಬೇಕು. ಸರ್ಕಾರಿ ಸವಲತ್ತು, ಸೇವೆಗಳನ್ನು ಅರ್ಹರಿಗೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ಹೇಳಿದರು.
ಪೋಸ್ಟರ್ ಬಿಡುಗಡೆ:
ಇದೇ ಸಂದರ್ಭ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕರ್ನಾಟಕ ಲೋಕಾಯುಕ್ತದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರದ ಕುರಿತು ಜಾಗೃತಿ ಅರಿವು ಸಪ್ತಾಹ-2025 ರ ಕರಪತ್ರ ಹಾಗೂ ಪೋಸ್ಟರ್‍ಗಳನ್ನು ಗೌರವಾನ್ವಿತ ಉಪಲೋಕಾಯುಕ್ತರು ಬಿಡುಗಡೆಗೊಳಿಸಿದರು.
ಪ್ರತಿಜ್ಞಾವಿಧಿ ಸ್ವೀಕಾರ:
ನಂತರ ಪ್ರತಿಯೊಬ್ಬರೂ ಭ್ರಷ್ಟಾಚಾರದ ವಿರುದ್ಧದ ಮನೋಭಾವನೆ ಹೊಂದುವ ಉದ್ದೇಶದಿಂದ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿಯನ್ನು ಗೌರವಾನ್ವಿತ ಉಪಲೋಕಾಯುಕ್ತರಾದ ನ್ಯಾ.ಬಿ.ವೀರಪ್ಪ ಅವರು ಬೋಧಿಸಿದರು.
ಈ ಸಂದರ್ಭ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳದ ಗೌರವಾನ್ವಿತ ಚಂದ್ರಶೇಖರ ಸಿ., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಹಾಂತೇಶ್ ಎಸ್. ದರಗದ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಕರ್ನಾಟಕ ಲೋಕಾಯುಕ್ತದ ವಿಚಾರಣೆ ಅಪರ ನಿಬಂಧಕರಾದ ಡಾ. ಕಸನಪ್ಪ ನಾಯ್ಕ, ರಮಾಕಾಂತ್ ಚವ್ಹಾಣ ಹಾಗೂ ಅರವಿಂದ ಎನ್.ವಿ., ರಾಯಚೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ್ ಎಸ್. ಚಿಟಗುಬ್ಬಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತಕುಮಾರ್, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಸೇರಿದಂತೆ ಜಿಲ್ಲಾ ಮಟ್ಟದ ಇಲಾಖೆ ಅಧಿಕಾರಿಗಳು ಮತ್ತು ಅಹವಾಲು ಹಾಗೂ ದೂರುಗಳನ್ನು ಸಲ್ಲಿಸಲು ಬಂದ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್