
ನವದೆಹಲಿ, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೇಶೀಯ ರಕ್ಷಣಾ ಉದ್ಯಮದಲ್ಲಿ ಖಾಸಗಿ ವಲಯದ ಪಾತ್ರವನ್ನು ಶೇಕಡಾ 25ರಿಂದ 50ರಷ್ಟಿಗೆ ಹೆಚ್ಚಿಸುವ ಗುರಿ ಹೊಂದಬೇಕೆಂದು ಕರೆ ನೀಡಿದರು. ಅವರು ಭಾರತೀಯ ರಕ್ಷಣಾ ತಯಾರಕರ ಸಂಘ ವಾರ್ಷಿಕ ಅಧಿವೇಶನದಲ್ಲಿ ಮಾತನಾಡುತ್ತಾ, ಕಳೆದ ಹತ್ತು ವರ್ಷಗಳಲ್ಲಿ ರಕ್ಷಣಾ ರಫ್ತು ₹1,000 ಕೋಟಿಯಿಂದ ₹23,500 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದರು.
ದೇಶೀಯ ಉತ್ಪಾದನೆಗೆ ಸರ್ಕಾರದಿಂದ ದೊಡ್ಡ ಮಟ್ಟದ ಉತ್ತೇಜನ ಸಿಕ್ಕಿದ್ದು, ಪ್ರತಿಯೊಂದು ವೇದಿಕೆ, ಉಪವ್ಯವಸ್ಥೆ ಮತ್ತು ಘಟಕಗಳಲ್ಲಿ ಕನಿಷ್ಠ ಶೇಕಡಾ 50 ಸ್ಥಳೀಯ ಅಂಶ ಇರಬೇಕೆಂದು ಉಲ್ಲೇಖಿಸಿದರು. ವಿದೇಶಿ ಉಪಕರಣಗಳ ಖರೀದಿಯಿಂದ ನಿರ್ವಹಣೆ ಮತ್ತು ದುರಸ್ತಿ ವೆಚ್ಚಗಳು ಹೆಚ್ಚಾಗುತ್ತಿದ್ದು, ಅದು ಆರ್ಥಿಕ ಒತ್ತಡವನ್ನು ಉಂಟುಮಾಡುತ್ತದೆ ಎಂದು ಹೇಳಿದರು.
ಭಾರತ ಕೇವಲ ಅಸೆಂಬ್ಲಿ ಕೇಂದ್ರವಾಗಿರಬಾರದು, ತಂತ್ರಜ್ಞಾನದ ನಿಜವಾದ ದೇಶೀಕರಣ ನಮ್ಮ ಗುರಿಯಾಗಬೇಕು,” ಎಂದು ರಾಜನಾಥ್ ಸಿಂಗ್ ಹೇಳಿದರು. ಅವರು ಆಪರೇಷನ್ ಸಿಂಧೂರ್ ವೇಳೆ ದೇಶೀಯ ಶಸ್ತ್ರಾಸ್ತ್ರಗಳಾದ ಆಕಾಶ್ ಕ್ಷಿಪಣಿ, ಬ್ರಹ್ಮೋಸ್, ಆಕಾಶ್ ಏರೋ ವ್ಯವಸ್ಥೆಗಳು ಪ್ರದರ್ಶಿಸಿದ ಸಾಮರ್ಥ್ಯವನ್ನು ಶ್ಲಾಘಿಸಿದರು.
ರಕ್ಷಣಾ ವಲಯವು ಕೇವಲ ಆರ್ಥಿಕ ಪ್ರಗತಿಯ ಸಾಧನವಾಗಿರದೆ, ರಾಷ್ಟ್ರೀಯ ಸಾರ್ವಭೌಮತ್ವದ ಅಡಿಪಾಯವಾಗಿದೆ ಎಂದು ಹೇಳಿದರು. “ಸ್ವಾವಲಂಬನೆ ನಮ್ಮ ಸರ್ಕಾರಕ್ಕೆ ಘೋಷಣೆ ಅಲ್ಲ ಅದು ಭಾರತದ ಪ್ರಾಚೀನ ಸಂಪ್ರದಾಯದ ಆಧುನೀಕರಣ ಎಂದು ರಾಜನಾಥ ಸಿಂಗ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa