
ಗಂಗಾವತಿ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಬಂಕಾಪೂರ ಸೀಮಾದಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಗಂಗಾವತಿಯ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮೇಘಾ ಸೋಮಣ್ಣನವರ ಅವರು ಅಪರಾಧಿಗೆ ದಂಡ ಸಹಿತ ಕಾರಾಗೃಹ ವಾಸದ ಶಿಕ್ಷೆಯನ್ನು ನೀಡಿ ಅಕ್ಟೋಬರ್ 18 ರಂದು ತೀರ್ಪು ಪ್ರಕಟಿಸಿದ್ದಾರೆ.
ಆರೋಪಿಯು ದಿನಾಂಕ: 25-10-2020 ರಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಕನಕಗಿರಿ-ಬಂಕಾಪೂರ ರಸ್ತೆಯ ಪಕ್ಕದಲ್ಲಿರುವ ಜಮೀನು ಸರ್ವೇ ನಂ.6 ರಲ್ಲಿರುವ ಮನೆಗೆ ಹೋಗಿ ರಾಡ್‍ನಿಂದ ಬೀಗ ಮುರಿದು ಮನೆ ಕಳ್ಳತನ ಯತ್ನಿಸಿದ್ದನು. ಮನೆಯಲ್ಲಿ ಏನೂ ಸಿಗದ ಕಾರಣ ಹತ್ತಿರದಲ್ಲಿದ್ದ ಶೆಡ್‍ನ ಬೀಗವನ್ನು ರಾಡ್‍ನಿಂದ ಒಡೆದು ಕೋಳಿಗಳ ಕಳ್ಳತನ ಮಾಡಲು ಯತ್ನಿಸಿದ್ದನು. ಈ ಸಂದರ್ಭ ಸಾಕ್ಷಿ ನಂ.1 ರವರು ಪಕ್ಕದ ಹೊಲದ ಸಾಕ್ಷಿ ನಂ.6 ಮತ್ತು 7 ರವರ ಜೊತೆ ಕೂಗಾಡುತ್ತಾ ಬರುವುದನ್ನು ನೋಡಿ ಆರೋಪಿಯು ತಾನು ತಂದಿದ್ದ ಬಜಾಜ್ ಪ್ಲಾಟಿನಾ ಮೊಟಾರ್ ಸೈಕಲ್ ನಂ. ಕೆಎ-34, ಎ-1286 ಮತ್ತು ಕಬ್ಬಿಣದ ರಾಡ್ ತೆಗೆದುಕೊಂಡು ಹೋಗುವಾಗ ಸಾಕ್ಷಿ ನಂ.1, 6 ಮತ್ತು 7 ರವರು ಆರೋಪಿಯನ್ನು ಠಾಣೆಗೆ ಒಪ್ಪಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿಗಳಾದ ಕನಕಗಿರಿ ಪೊಲೀಸ್ ಠಾಣೆಯ ಪಿ.ಎಸ್.ಐ ಕಾಸಿಂಸಾಬ ಹಾಗೂ ಎ.ಎಸ್.ಐ ಶರಣಪ್ಪ ಅವರು ಭಾರತೀಯ ದಂಡ ಸಂಹಿತೆ ಕಲಂ 380, 457 ಹಾಗೂ 511 ಪ್ರಕಾರ ಆರೋಪಿತನ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಮಂಜುನಾಥ @ ಮಂಜಪ್ಪ ತಂ. ಮರಿಯಪ್ಪ ಭಜಂತ್ರಿಯ ವಿರುದ್ಧ ಗಂಗಾವತಿಯ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನಡೆಸಿದ ನ್ಯಾಯಾಧೀಶರು ಸಾಕ್ಷಿದಾರರ ಸಾಕ್ಷ್ಯ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಆರೋಪಿಯು ತಪ್ಪಿತಸ್ಥ ಎಂದು ತೀರ್ಪು ನೀಡಿ, ಆರೋಪಿತನಿಗೆ ಭಾರತೀಯ ದಂಡ ಸಂಹಿತೆ ಕಲಂ 457 ಅಪರಾಧಕ್ಕೆ 2 ವರ್ಷ ಕಾರಾಗೃಹ ವಾಸದ ಶಿಕ್ಷೆ ಹಾಗೂ ರೂ.2 ಸಾವಿರ ಗಳ ದಂಡ, ದಂಡ ಕೊಡದೇ ಇದ್ದಲ್ಲಿ 2 ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆ ಅನುಭವಿಸುವಂತೆ, ಕಲಂ 511 ಅಪರಾಧಕ್ಕೆ 1 ವರ್ಷದ ಕಾರಾಗೃಹ ವಾಸದ ಶಿಕ್ಷೆ ಹಾಗೂ ರೂ.2 ಸಾವಿರಗಳ ದಂಡ, ದಂಡ ಕೊಡದೇ ಇದ್ದಲ್ಲಿ 2 ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಕರುಣಾಕರ ಅವರು ವಾದ ಮಂಡಿಸಿದ್ದರು ಎಂದು ಗಂಗಾವತಿಯ ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್