ಮಾಲೂರು ಮೂಲದ ವಿದ್ಯಾರ್ಥಿಗಳ ಗಣಿತ ಸಾಧನೆಗೆ ಕರ್ನಾಟಕ ಸರ್ಕಾರದ ಮನ್ನಣೆ
ಮಾಲೂರು ಮೂಲದ ವಿದ್ಯಾರ್ಥಿಗಳ ಗಣಿತ ಸಾಧನೆಗೆ ಕರ್ನಾಟಕ ಸರ್ಕಾರದ ಮನ್ನಣೆ
ಚಿತ್ರ : ಗಣಿತದಲ್ಲಿನ ಅಸಾಮಾನ್ಯ ಮತ್ತು ವಿಶ್ವ ದಾಖಲೆಯ ಸಾಧನೆಗಾಗಿ ಮಲೂರು ಮೂಲದ ಯುವ ಪ್ರತಿಭೆಗಳಾದ ಮಾಸ್ಟರ್ ವಿಭವಿ ಸಿ. ಗೌಡ ಮತ್ತು ಮಾಸ್ಟರ್ ಪ್ರಣವ್ ಸಿ. ಗೌಡರವರನ್ನು ಜಿಲ್ಲಾಧಿಕಾರಿಗಳಾದ ಡಾ.ಎಂ.ಆರ್.ರವಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.


ಕೋಲಾರ, ೨೪ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಗಣಿತದಲ್ಲಿನ ಅಸಾಮಾನ್ಯ ಮತ್ತು ವಿಶ್ವ ದಾಖಲೆಯ ಸಾಧನೆಗಾಗಿ ಮಲೂರು ಮೂಲದ ಯುವ ಪ್ರತಿಭೆಗಳಾದ ಮಾಸ್ಟರ್ ವಿಭವಿ ಸಿ. ಗೌಡ ಮತ್ತು ಮಾಸ್ಟರ್ ಪ್ರಣವ್ ಸಿ. ಗೌಡ ಅವರಿಗೆ ಇಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಯಿಂದ ಗೌರವಪೂರ್ವಕವಾಗಿ ’ಪ್ರಶಂಸಾ ಪತ್ರ’ ನೀಡಿ ಗೌರವಿಸಲಾಯಿತು. ಜಿಲ್ಲಾಧಿಕಾರಿಗಳಾದ ಡಾ.ಎಂ.ಆರ್.ರವಿ ಅವರು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

ಮಾಸ್ಟರ್ ವಿಭವಿ ಸಿ. ಗೌಡ: ಇವರು ಇತ್ತೀಚೆಗೆ ಮಲೂರಿನಲ್ಲಿ ನಡೆದ ’ವರ್ಲ್ಡ್ ರೆಕಾರ್ಡ್ ಕ್ವೆಸ್ಟ್ ಇನ್ ಅಡ್ವಾನ್ಸ್ಡ್ ಮೆಂಟಲ್ ಮ್ಯಾಥ್ ಕ್ಯಾಲ್ಕುಲೇಷನ್ ? ೨೦೨೫’ ಸ್ಪರ್ಧೆಯಲ್ಲಿ ದೇಶಾದ್ಯಂತದ ೨೦೦ಕ್ಕೂ ಹೆಚ್ಚು ದೇಶಗಳ ಮತ್ತು ೫೦೦೦ಕ್ಕೂ ಅಧಿಕ ಸ್ಪರ್ಧಿಗಳ ನಡುವೆ ’ಪ್ರೈಮ್ ನಂಬರ್ಸ್ ಕ್ಯಾಟಗರಿ’ಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಮಾಸ್ಟರ್ ಪ್ರಣವ್ ಸಿ. ಗೌಡ: ಇವರು ಇದೇ ಸ್ಪರ್ಧೆಯಲ್ಲಿ ’ಅಡ್ವಾನ್ಸ್ಡ್ ಮೆಂಟಲ್ ಮ್ಯಾಥ್ ಕ್ಯಾಲ್ಕುಲೇಷನ್’ ವಿಭಾಗದಲ್ಲಿ ಪ್ರತಿಷ್ಠಿತ ೨೬ ವಿಶ್ವ ದಾಖಲೆ ಪ್ರಶಸ್ತಿಗಳನ್ನು ಗೆದ್ದು ಅಸಾಧಾರಣ ಸಾಧನೆ ಮಾಡಿದ್ದಾರೆ.

ಈ ಪ್ರತಿಷ್ಠಿತ ಸ್ಪರ್ಧೆಯು ಸೆಪ್ಟೆಂಬರ್ ೧೮, ೨೦೨೫ ರಂದು ಮಲೂರು-ಹೊಸೂರು ಮುಖ್ಯ ರಸ್ತೆಯಲ್ಲಿರುವ ಆರ್.ಜಿ. ಕನ್ವೆನ್ಷನಲ್ ಹಾಲ್ನಲ್ಲಿ ’ಸ್ಪರ್ಧಾಗುರು ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಬ್ಯಾನರ್ ಅಡಿಯಲ್ಲಿ ನಡೆದಿತ್ತು. ಪ್ರಣವ್ ಸಿ. ಗೌಡ ಅವರಿಗೆ ಶ್ರೀಮತಿ ಸುಕನ್ಯಾ ಚಂದ್ರಶೇಖರ್ ಮತ್ತು ಶ್ರೀ ಮೂರ್ತಿ ಎಸ್. ವೈದಿಕ್ ಮ್ಯಾಥ್ ಅಂಡ್ ಆಪ್ಟಿಟ್ಯೂಡ್ ಟ್ರೈನರ್ಸ್, ಸ್ಪಾದ್ಯಾಗುಣ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ತರಬೇತಿ ನೀಡಲಾಗಿದೆ.

ಇಬ್ಬರು ವಿದ್ಯಾರ್ಥಿಗಳ ಸಾಧನೆಗಳನ್ನು ಶ್ಲಾಘಿಸಿರುವ ಪ್ರಶಂಸಾ ಪತ್ರದಲ್ಲಿ, ನಿಮ್ಮ ಅಸಾಧಾರಣ ನಿರ್ಣಯ, ಅಚಲ ಸಮರ್ಪಣೆ ಮತ್ತು ಅತ್ಯುತ್ತಮ ಪ್ರತಿಭೆ ಕೇವಲ ವೈಯಕ್ತಿಕ ಉತ್ಕೃಷ್ಟತೆಯನ್ನು ಪ್ರದರ್ಶಿಸುವುದಲ್ಲದೆ, ಇತರರನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ. ಈ ಅತ್ಯುತ್ತಮ ಸಾಧನೆಯು ನಿಮ್ಮ ಕಠಿಣ ಪರಿಶ್ರಮ, ಶಿಸ್ತು ಮತ್ತು ಉತ್ಸಾಹಕ್ಕೆ ನಿಜವಾದ ಸಾಕ್ಷಿಯಾಗಿದೆ. ನಿಮ್ಮ ಸಾಧನೆಯು ಇತಿಹಾಸದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದ್ದು, ಭವಿಷ್ಯದ ಪೀಳಿಗೆಗೆ ಉತ್ಕೃಷ್ಟತೆಯನ್ನು ಸಾಧಿಸಲು ಒಂದು ದೀಪಸ್ತಂಭವಾಗಿ ನಿಲ್ಲುತ್ತದೆ ಎಂದು ತಿಳಿಸಲಾಗಿದೆ.

ವಿಭವಿ ಗೌಡ ಮತ್ತು ಪ್ರಣವ್ ಸಿ. ಗೌಡ ಅವರು ಶ್ರೀ ಚಂದ್ರಶೇಖರ್ ಮತ್ತು ಶ್ರೀಮತಿ ಸುಕನ್ಯಾ ಚಂದ್ರಶೇಖರ್ ಅವರ ಪುತ್ರರಾಗಿದ್ದಾರೆ. ಕೋಲಾರ ಜಿಲ್ಲೆಯ ಈ ಇಬ್ಬರು ಯುವ ಸಾಧಕರ ಸಾಧನೆಯು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು, ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಮಾಲೂರು ತಾಲ್ಲೂಕಿನ ನಾಗರಿಕರು ಈ ಯುವ ಪ್ರತಿಭೆಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಚಿತ್ರ : ಗಣಿತದಲ್ಲಿನ ಅಸಾಮಾನ್ಯ ಮತ್ತು ವಿಶ್ವ ದಾಖಲೆಯ ಸಾಧನೆಗಾಗಿ ಮಲೂರು ಮೂಲದ ಯುವ ಪ್ರತಿಭೆಗಳಾದ ಮಾಸ್ಟರ್ ವಿಭವಿ ಸಿ. ಗೌಡ ಮತ್ತು ಮಾಸ್ಟರ್ ಪ್ರಣವ್ ಸಿ. ಗೌಡರವರನ್ನು ಜಿಲ್ಲಾಧಿಕಾರಿಗಳಾದ ಡಾ.ಎಂ.ಆರ್.ರವಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande