ವಾಷಿಂಗ್ಟನ್, 23 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಷ್ಯಾದ ಪ್ರಮುಖ ತೈಲ ಕಂಪನಿಗಳಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್ ಮೇಲೆ ಅಮೆರಿಕ ಸರ್ಕಾರ ಕಠಿಣ ಆರ್ಥಿಕ ನಿರ್ಬಂಧಗಳು ವಿಧಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಿಂದ ರಷ್ಯಾ ವಿರುದ್ಧ ಜಾರಿಯಾದ ಇದು ಅತ್ಯಂತ ಪ್ರಮುಖ ಕ್ರಮವೆಂದು ಅಂತರರಾಷ್ಟ್ರೀಯ ವಲಯ ವಿಶ್ಲೇಷಿಸಿದೆ.
ಟ್ರಂಪ್ ಅವರು ಬುಧವಾರ ವೈಟ್ ಹೌಸ್‌ನಲ್ಲಿ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಬಂಧಗಳ ಬಗ್ಗೆ ಘೋಷಣೆ ಮಾಡಿದರು. ಬುಡಾಪೆಸ್ಟ್‌ನಲ್ಲಿ ನಡೆಯಬೇಕಿದ್ದ ಟ್ರಂಪ್–ಪುಟಿನ್ ಶೃಂಗಸಭೆ ರದ್ದಾದ ನಂತರ ಈ ನಿರ್ಧಾರ ಪ್ರಕಟವಾಗಿದೆ.
ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿಕೆಯಲ್ಲಿ, “ಈ ಕಂಪನಿಗಳು ಕ್ರೆಮ್ಲಿನ್‌ನ ಯುದ್ಧ ಯಂತ್ರದ ಅವಳಿ ಎಂಜಿನ್‌ಗಳಂತಿವೆ. ರಷ್ಯಾ–ಉಕ್ರೇನ್ ಯುದ್ಧ ತಕ್ಷಣ ನಿಲ್ಲಬೇಕಾಗಿದೆ” ಎಂದು ತಿಳಿಸಿದ್ದಾರೆ.
ಟ್ರಂಪ್ ಅವರು ತಮ್ಮ ಘೋಷಣೆಯಲ್ಲಿ, “ನಾನು ವ್ಲಾಡಿಮಿರ್ ಪುಟಿನ್ ಜೊತೆ ಹಲವಾರು ಬಾರಿ ಮಾತನಾಡಿದ್ದೇನೆ. ಆದರೆ ಅವರಿಂದ ಯಾವುದೇ ದೃಢ ನಿರ್ಧಾರ ಬಾರದಿದ್ದರಿಂದ ಶೃಂಗಸಭೆ ರದ್ದುಗೊಳಿಸಲು ತೀರ್ಮಾನಿಸಿದೆ. ರಷ್ಯಾ ವಿರುದ್ಧ ಕ್ರಮ ಕೈಗೊಳ್ಳಲು ಈಗ ಸರಿಯಾದ ಸಮಯ” ಎಂದು ಹೇಳಿದರು.
ದಿ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಉಕ್ರೇನ್ ಮೇಲಿನ ಬೃಹತ್ ಆಕ್ರಮಣದ ಬಳಿಕ ಅಮೆರಿಕದಿಂದ ರಷ್ಯಾದ ಇಂಧನ ಕ್ಷೇತ್ರದ ವಿರುದ್ಧ ನಡೆದಿರುವ ಇದು ಅತ್ಯಂತ ಗಂಭೀರ ಕ್ರಮವಾಗಿದೆ. ಟ್ರಂಪ್ ಅವರ ಪೂರ್ವವರ್ತಿ ಜೋ ಬೈಡನ್ ಆಡಳಿತವು ಮಿತ್ರ ರಾಷ್ಟ್ರಗಳ ಒತ್ತಡದಿಂದ ಈ ಕಂಪನಿಗಳ ಮೇಲೆ ನೇರ ನಿರ್ಬಂಧ ಹೇರಲು ಹಿಂದೆ ಸರಿದಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa