ನವದೆಹಲಿ, 23 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತದ ಮೂರು ಸಶಸ್ತ್ರ ಪಡೆಗಳ (ಸೇನೆ, ನೌಕಾಪಡೆ, ವಾಯುಪಡೆ) ಸಾಮರ್ಥ್ಯ ವೃದ್ಧಿಗಾಗಿ ಕೇಂದ್ರ ಸರ್ಕಾರ ₹79 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಖರೀದಿಗೆ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಭಾರತೀಯ ಸೇನೆಗೆ ನಾಗ್ ಕ್ಷಿಪಣಿ ವ್ಯವಸ್ಥೆ ಮಾರ್ಕ್-2, ನೆಲ ಆಧಾರಿತ ಮೊಬೈಲ್ ಎಲಿನ್ ವ್ಯವಸ್ಥೆ ಮತ್ತು ಹೈ ಮೊಬಿಲಿಟಿ ವೆಹಿಕಲ್‌ಗಳು ಖರೀದಿಗೆ ಅನುಮೋದನೆ ದೊರೆತಿದೆ. ಈ ವ್ಯವಸ್ಥೆಗಳು ಶತ್ರುಗಳ ಯುದ್ಧ ವಾಹನಗಳು, ಬಂಕರ್‌ಗಳು ಹಾಗೂ ಕೋಟೆಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿವೆ.
ನೌಕಾಪಡೆಗೆ ಲ್ಯಾಂಡಿಂಗ್ ಪ್ಲಾಟ್‌ಫಾರ್ಮ್ ಡಾಕ್‌ಗಳು 30 ಮಿಮೀ ನೇವಲ್ ಸರ್ಫೇಸ್ ಗನ್‌ಗಳು, ಅಡ್ವಾನ್ಸ್ಡ್ ಲೈಟ್ ವೇಟ್ ಟಾರ್ಪಿಡೊಗಳು ಮತ್ತು ಮದ್ದುಗುಂಡುಗಳು ಖರೀದಿಸಲಾಗುತ್ತಿವೆ. ಈ ಉಪಕರಣಗಳು ಉಭಯಚರ, ಶಾಂತಿಪಾಲನಾ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗೆ ನೆರವಾಗಲಿವೆ.
ವಾಯುಪಡೆಗೆ ದೀರ್ಘ ವ್ಯಾಪ್ತಿಯ ಗುರಿ ನಾಶ ವ್ಯವಸ್ಥೆ ಸೇರಿ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಇದು ಸ್ವಯಂಚಾಲಿತ ಟೇಕ್‌ಆಫ್, ಗುರಿ ಪತ್ತೆ ಹಾಗೂ ಪೇಲೋಡ್ ವಿತರಣೆಯಲ್ಲೂ ಪರಿಣತಿ ಹೊಂದಿದೆ.
ಈ ನಿರ್ಧಾರಗಳು ಸಶಸ್ತ್ರ ಪಡೆಗಳ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ ‘ಆತ್ಮನಿರ್ಭರ ಭಾರತ’ ಗುರಿಯನ್ನು ಬಲಪಡಿಸಲಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa