ಕಾಬೂಲ್, 18 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನವು ಶುಕ್ರವಾರ ಮಧ್ಯರಾತ್ರಿಯ ವೇಳೆಗೆ ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ಅರ್ಗಾನ್ ಮತ್ತು ಬಿರ್ಮಲ್ ಜಿಲ್ಲೆಗಳಲ್ಲಿ ಭಾರೀ ವೈಮಾನಿಕ ದಾಳಿ ನಡೆಸಿದ್ದು, ಎಂಟು ಅಫ್ಘಾನ್ ಕ್ರಿಕೆಟಿಗರು ಸೇರಿದಂತೆ ಹಲವು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದೋಹಾದಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಗಳ ಸಮಯದಲ್ಲಿ ತಾತ್ಕಾಲಿಕ ಕದನ ವಿರಾಮ ಜಾರಿಯಲ್ಲಿದ್ದರೂ, ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಪಾಕಿಸ್ತಾನಿ ಸೇನೆಯು ಗುರಿಯಾಗಿಸಿಕೊಂಡ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ ಅನೇಕರು ಬಲಿಯಾಗಿದ್ದಾರೆ. ನೂರಾರು ಮನೆಗಳು ಮತ್ತು ಶಾಲೆಗಳು ನಾಶವಾಗಿವೆ ಎಂದು ಅಫ್ಘಾನಿಸ್ತಾನದ ತುಳುವಾ ನ್ಯೂಸ್ ವರದಿ ಮಾಡಿದೆ.
ಅಫ್ಘಾನ್ ಕ್ರಿಕೆಟ್ ಮಂಡಳಿಯ ಮೂಲಗಳ ಪ್ರಕಾರ, ಸಾವನ್ನಪ್ಪಿದ ಆಟಗಾರರು ಪ್ರಾಂತೀಯ ಕೇಂದ್ರದಿಂದ ತಮ್ಮ ಗ್ರಾಮಗಳಿಗೆ ಹಿಂತಿರುಗುವ ವೇಳೆ ದಾಳಿಗೆ ಬಲಿಯಾಗಿದ್ದು, ಸ್ಥಳೀಯ ನಿವಾಸಿಗಳ ಮಾಹಿತಿ ಪ್ರಕಾರ, ದಾಳಿಗಳು ಬಹುತೇಕ ವಸತಿ ಪ್ರದೇಶಗಳಲ್ಲಿ ನಡೆದಿದ್ದು, ನಾಗರಿಕರ ಜೀವಹಾನಿ ಅತಿದೊಡ್ಡ ಮಟ್ಟದಲ್ಲಿ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa