ಕೋಲಾರ, ೧೭ ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಎತ್ತಿನಹೊಳೆ ಯೋಜನೆಯಡಿ ಕೋಲಾರ ಜಿಲ್ಲೆಗೆ ಅಗತ್ಯವಿರುವ ೨.೮ ಟಿಎಂಸಿ ಕುಡಿಯುವ ನೀರನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಗೆ ಮನವಿ ಸಲ್ಲಿಸಿದರು.
ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಅವರು ಈ ಬೇಡಿಕೆ ಮಂಡಿಸಿದರು. ಸಮಿತಿಯ ಅಧ್ಯಕ್ಷರಾದ ಟಿ.ಎ. ಶರವಣ ಹಾಗೂ ಸದಸ್ಯರ ತಂಡ ಜಲಸಂಪನ್ಮೂಲ ಮತ್ತು ಸಹಕಾರ ಇಲಾಖೆಗಳ ಭರವಸೆಗಳ ಕುರಿತು ಚರ್ಚೆ ನಡೆಸಲು ಕೋಲಾರಕ್ಕೆ ಭೇಟಿ ನೀಡಿತ್ತು.
ಪೂರ್ವ ನಿಗದಿಯಂತೆ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಮತ್ತು ಕೃಷಿ ಮಾರುಕಟ್ಟೆ ಪ್ರಾಂಗಣಕ್ಕೆ ನಿವೇಶನ ಮಂಜೂರು ಮಾಡುವ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಜಿಲ್ಲೆಯಲ್ಲಿ ಯಾವುದೇ ನೈಸರ್ಗಿಕ ಹರಿಯುವ ಜಲಮೂಲಗಳಿಲ್ಲ. ೩,೦೦೦ಕ್ಕೂ ಹೆಚ್ಚು ಕೆರೆಗಳಲ್ಲಿ ಸಂಗ್ರಹವಾಗುವ ನೀರನ್ನೇ ಕೃಷಿ ಮತ್ತು ಜೀವನಕ್ಕೆ ಅವಲಂಬಿಸಲಾಗಿದೆ. ಪ್ರಸ್ತುತ ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳನ್ನು ತುಂಬಿಸಲಾಗುತ್ತಿದೆಯಾದರೂ, ಇದು ಅಂತರ್ಜಲ ವೃದ್ಧಿಗೆ ಸಹಾಯಕವಾಗಿದೆಯೇ ಹೊರತು ಕುಡಿಯುವ ನೀರಿನ ಸಮಸ್ಯೆ ಹಾಗೆಯೇ ಉಳಿದಿದೆ. ಜಿಲ್ಲೆಯಾದ್ಯಂತ ಕುಡಿಯುವ ನೀರು ಒದಗಿಸಲು ಕನಿಷ್ಠ ೨.೮ ಟಿಎಂಸಿ ನೀರಿನ ಅಗತ್ಯವಿದ್ದು, ಎತ್ತಿನಹೊಳೆ ಯೋಜನೆಯಡಿ ನೀರು ಒದಗಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸಮಿತಿಗೆ ಮನವಿ ಮಾಡಿದರು.
ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಣ್ಣಚಿತ್ತಯ್ಯ ಮಾತನಾಡಿ ಎತ್ತಿನಹೊಳೆ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಿದರು. ೨೦೧೪ರಲ್ಲಿ ಪ್ರಾರಂಭವಾದ ಈ ಯೋಜನೆ ಒಟ್ಟು ೨೪,೦೦೦ ಕೋಟಿ ರೂ. ವೆಚ್ಚದ್ದಾಗಿದೆ. ಜಲಾಶಯದಲ್ಲಿ ಗರಿಷ್ಠ ೨೪ ಟಿಎಂಸಿ ನೀರು ಸಂಗ್ರಹವಾಗುವ ನಿರೀಕ್ಷೆ ಇದ್ದು, ಅದರಲ್ಲಿ ೧೮ ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಿಡಲು ಚಿಂತಿಸಲಾಗಿದೆ. ಉಳಿದ ೧೦ ಟಿಎಂಸಿ ನೀರನ್ನು ಏಳು ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಬಳಸಲಾಗುವುದು ಎಂದು ತಿಳಿಸಿದರು. ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಅಕ್ಟೋಬರ್ ೨೦೨೭ರ ವೇಳೆಗೆ ಕೋಲಾರಕ್ಕೆ ಕುಡಿಯುವ ನೀರು ಪೂರೈಕೆ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಿತಿ ಅಧ್ಯಕ್ಷ ಟಿ.ಎ. ಶರವಣ ಅವರು ಮಾತನಾಡಿ ಪಕ್ಕದ ರಾಜ್ಯಗಳಲ್ಲಿ ೫೦೦ಕ್ಕೂ ಹೆಚ್ಚು ಕಿ.ಮೀ. ದೂರದಿಂದ ಕೃಷ್ಣಾ ನದಿಯ ನೀರನ್ನು ತರಲಾಗಿದೆ. ಕೋಲಾರಕ್ಕೆ ನೀರು ತರಲು ಕೇವಲ ೨೫೨ ಕಿ.ಮೀ. ಕ್ರಮಿಸಬೇಕಿದೆ. ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇದ್ದರೆ ಇಂತಹ ಕಾರ್ಯಗಳನ್ನು ಸಾಧಿಸಬಹುದು ಎಂದು ಅವರು ಹೇಳಿದರು. ಇದಕ್ಕೆ ಉತ್ತರಿಸಿದ ವ್ಯವಸ್ಥಾಪಕ ನಿರ್ದೇಶಕರು, ಈಗಾಗಲೇ ೩೨.೫ ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಸಭೆಗೆ ತಿಳಿಸಿದರು.
ಇದಕ್ಕಾಗಿ ಐದು ಬಾರಿ ಪ್ರಯತ್ನಗಳು ನಡೆದಿವೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ವಿವರಿಸಿದರು. ಪ್ರಸ್ತುತ ಮಾರುಕಟ್ಟೆಗೆ ಸೂಕ್ತವಾದ ೬೦ ಎಕರೆ ಕಂದಾಯ ಜಾಗವನ್ನು ಗುರುತಿಸಲಾಗಿದೆ. ಇದಕ್ಕೆ ಹೊಂದಿಕೊಂಡಿರುವ ೨೦ ಎಕರೆ ಅರಣ್ಯ ಪ್ರದೇಶವನ್ನು ಪರಿವರ್ತಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಗುರುತಿಸಲಾದ ೬೦ ಎಕರೆ ಜಾಗ ಮಂಜೂರಾತಿಗಾಗಿ ರಾಜ್ಯ ಸರ್ಕಾರಕ್ಕೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಪ್ರಸ್ತಾವನೆಯ ಎಲ್ಲಾ ವಿವರಗಳನ್ನು ಸಮಿತಿಗೆ ಸಲ್ಲಿಸಿದರೆ, ಸಂಸದರ ನಿಯೋಗವನ್ನು ಕಳುಹಿಸಿ ಜಾಗ ಮಂಜೂರಾತಿಗೆ ಪ್ರಯತ್ನಿಸುವುದಾಗಿ ಸಮಿತಿ ಅಧ್ಯಕ್ಷರು ಭರವಸೆ ನೀಡಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ನಿರಾಣಿ ಹಣಮಂತ ರುದ್ರಪ್ಪ, ಕೆ. ಪ್ರತಾಪಾಸಿಂಹ ನಾಯಕ್, ಕೆ.ಎಸ್. ನವೀನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ,ಸಹಾಯಕ ಆಯುಕ್ತೆ ಡಾ. ಮೈತ್ರಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ್, ಮುಖ್ಯ ಅಭಿಯಂತರರಾದ ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ; ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಸಭೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್