ಯುವ ವಿದ್ವಾಂಸ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರಿಗೆ ಸರ್ ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ
ಯುವ ವಿದ್ವಾಂಸ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರಿಗೆ ಸರ್ ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ
ಚಿತ್ರ : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಾನದ ೩೩ನೇ ವಾರ್ಷಿಕೋತ್ಸವ ಹಾಗೂ ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನದಲ್ಲಿ ಯುವ ವಿದ್ವಾಂಸ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರಿಗೆ ಪ್ರಶಸ್ತಿಯನ್ನು ನೀಡುವ ಮೂಲಕ ಪುರಸ್ಕರಿಸಲಾ


ಕೋಲಾರ, ೧೭ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದ ವತಿಯಿಂದ ಯುವವಿದ್ವಾಂಸ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರಿಗೆ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಹೆಸರಿನ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಾನದ ೩೩ನೇ ವಾರ್ಷಿಕೋತ್ಸವ ಹಾಗೂ ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಹೆಸರಿನ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡುವ ಮೂಲಕ ಪುರಸ್ಕರಿಸಲಾಗಿದೆ.

ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿ ಗ್ರಾಮದವರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿ ‘ಕನ್ನಡ ಎಂ.ಎ’ ಮತ್ತು ಕನ್ನಡದ ಪ್ರಸಿದ್ಧ ವಿದ್ವಾಂಸರಾದ ಪ್ರೊ,ಕೃಷ್ಣಮೂರ್ತಿ ಹನೂರು ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಜಾನಪದ, ಶಾಸ್ತ್ರೀಯ ಕನ್ನಡ, ಅನುಭಾವ ಸಾಹಿತ್ಯ, ಬೌದ್ಧ ಸಾಹಿತ್ಯ, ಅಂಬೇಡ್ಕರ್ ಚಿಂತನೆ, ನಾಟಕ, ವಿಮರ್ಶೆ, ಅನುವಾದ, ಸಂಶೋಧನೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಆಸಕ್ತಿವುಳ್ಳವರಾಗಿದ್ದು ಈವರೆಗೆ ೩೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಹಿರಿಯ ವಿಮರ್ಶಕರಾದ ಡಾ.ಚಂದ್ರಶೇಖರ ವಿ.ನಂಗಲಿ ಅವರು ಗುರ್ತಿಸಿರುವಂತೆ, ‘ಇವರ ಕೃತಿಗಳಲ್ಲಿ ಮಾತೃತ್ವ-ಬುದ್ಧತ್ವ-ಕರ್ಣತ್ವ-ದಲಿತತ್ವದ ಚತುರ್ಮುಖ ಸೌಂದರ್ಯದ ದರ್ಶನವಿದೆ”.

ಬೇಲಿಗಿಡಗಳು ಮಾತಾಡುತಾವೆ, ಕರ್ಣರಸಾಯನ, ಬಸವ ಸಿನಿಮಾ ಬುದ್ಧ ಪ್ರತಿಮಾ, ಅಂತರಗಂಗವ್ವ, ನಾಟಕ-ಸಂಸ್ಕೃತಿ ದರ್ಶನ, ಬುದ್ಧನಗೆಯ ತಾಯಿನದಿ, ಬೋಧಿಯಾನ, ಶರಣಯಾನ, ಒಡಲುರಿ, ಜನಮುಖಿ, ನುಡಿಕುಲುಮೆಯ ಕಿಡಿಗನ್ನಡಿ, ನಿಚ್ಚಂಪೊಸತು, ನಿಸ್ಸೀಮ ನುಡಿಯಾನ ಮೊದಲಾದವು ಅವರ ಪ್ರಮುಖ ಕೃತಿಗಳಾಗಿವೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಫೆಲೋಷಿಫ್ ಅನುವಾದ ಯೋಜನೆಯ ಅಂಗವಾಗಿ ತೆಲುಗಿನ ಡಾ.ಬಿ.ಎಸ್.ಎಲ್.ಹನುಮಂತರಾವು ವಿರಚಿತ ‘ಆಂಧ್ರ ಪ್ರದೇಶದ ಜೈನ-ಬೌದ್ಧ ಧರ್ಮಗಳು’ಕೃತಿಯನ್ನು ಕನ್ನಡ ಅನುವಾದಿಸಿದ್ದಾರೆ.

ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ವತಿಯಿಂದ ‘ಶಾಸ್ತ್ರೀಯ ಕನ್ನಡ ಭಾಷೆ’ ಸಂಬಂಧವಾಗಿ ಯುವ ವಿದ್ವಾಂಸರು ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ನೀಡುವ ‘ರಾಷ್ಟ್ರಪತಿ ಪ್ರಶಸ್ತಿ-೨೦೧೯ರ ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್’ ಪುರಸ್ಕಾರಕ್ಕೂ ಭಾಜನರಾಗಿದ್ದರು. ಪ್ರಸ್ತುತ ಬೆಂಗಳೂರಿನ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದು, ಕನ್ನಡ ಬೋಧನೆ ಮತ್ತು ಸಂಶೋಧನೆಯಲ್ಲಿ ನಿರತರಾಗಿದ್ದಾರೆ.

ಚಿತ್ರ : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಾನದ ೩೩ನೇ ವಾರ್ಷಿಕೋತ್ಸವ ಹಾಗೂ ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನದಲ್ಲಿ ಯುವ ವಿದ್ವಾಂಸ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರಿಗೆ ಪ್ರಶಸ್ತಿಯನ್ನು ನೀಡುವ ಮೂಲಕ ಪುರಸ್ಕರಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande